ಬಾಂಗ್ಲಾ ಮೇಲೆ ಮಿಂಚಿದ ಯುವಶಕ್ತಿ
ಬಾಂಗ್ಲಾದೇಶಕ್ಕೆ ಏಕದಿನ ಸರಣಿಗಾಗಿ ಪ್ರವಾಸ ಕೈಗೊಂಡಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ ಯಶಸ್ಸು ಕಂಡಿದೆ.
ಮೀರ್ಪುರ್: ಬಹುತೇಕ 'ಬಿ' ದರ್ಜೆಯ ತಂಡವಾಗಿ ಬಾಂಗ್ಲಾದೇಶಕ್ಕೆ ಏಕದಿನ ಸರಣಿಗಾಗಿ ಪ್ರವಾಸ ಕೈಗೊಂಡಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ ಯಶಸ್ಸು ಕಂಡಿದೆ.
ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಈ ಗೆಲವಿನೊಂದಿಗೆ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು.
ಗೆಲ್ಲಲು 273 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದಿದ್ದ ಭಾರತ, 16.4 ಓವರುಗಳಲ್ಲಿ 1 ವಿಕೆಟ್ಗೆ 100 ರನ್ಗಳಿಸಿದಾಗ ಮಳೆ ಅಡ್ಡಿಪಡಿಸಿತು.
ಸುಮಾರು ಒಂದೂವರೆ ಗಂಟ ನಂತರ ಮತ್ತೆ ಆಟ ಮುಂದುವರಿದಾಗ ಡಕ್ವರ್ತ್ ಲೂಯಿಸ್ ನಿಯಮದಡಿ ಭಾರತಕ್ಕೆ ಗೆಲ್ಲಲು 26 ಓವರುಗಳಲ್ಲಿ 150 ರನ್ಗಳ ಗುರಿ ನೀಡಲಾಯಿತು. ಟೀಂ ಇಂಡಿಯಾ ಇನ್ನೂ 7 ಎಸೆತಗಳು ಉಳಿದಿರುವಂತೆಯೇ 3 ವಿಕೆಟ್ಗೆ 153 ರನ್ಗಳಿಸಿ ಗೆಲವಿನ ಕೇಕೆ ಹಾಕಿತು.
ಆರಂಭಿಕರಾದ ಅಜಿಂಕ್ಯಾ ರಹಾನೆ (64ರನ್, 70 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ (50ರನ್, 44 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕ ಬಾರಿಸಿ ಭಾರತಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು.
ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 9 ವಿಕೆಟ್ ನಷ್ಟಕ್ಕೆ 272 ರನ್ಗಳ ಉತ್ತಮ ಮೊತ್ತ ಕಲೆಹಾಕಿತು.
ಮಧ್ಯಮ ಕ್ರಮಾಂಕದ ಆಟಗಾರರಾದ ಮುಷ್ಫೀಕರ್ ರಹೀಂ ಮತ್ತು ಶಕೀಬ್ ಅಲ್ ಹಸನ್ ಅರ್ಧಶತಕಗಳೊಂದಿಗೆ ನೆರವಾದರು. ನಾಯಕ ಮುಷ್ಫೀಕರ್ (59ರನ್, 63 ಎಸೆತ, 3 ಬೌಂಡರಿ, 3 ಸಿಕ್ಸರ್) ಮತ್ತು ಶಕೀಬ್ (52ರನ್, 58 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರತದ ದಾಳಿಯನ್ನು ಉತ್ತಮ ರೀತಿಯಲ್ಲಿ ಎದುರಿಸಿದರು.
ಉಳಿದಂತೆ, ಆರಂಭಿಕ ಅನಾಮುಲ್ ಹಕ್ (44) ಮತ್ತು ಮಹಮುದುಲ್ಲಾ (41) ಸಹ ಉಪಯುಕ್ತ ಕಾಣಿಕೆ ನೀಡಿದರು.
ಭಾರತದ ಪರ ಉಮೇಶ್ ಯಾದವ್ 3 ಹಾಗೂ ಅಮಿತ್ ಮಿಶ್ರಾ ಮತ್ತು ಪರ್ವೇಜ್ ರಸೂಲ್ ತಲಾ 2 ವಿಕೆಟ್ ಪಡೆದರು.
ಈ ಪಂದ್ಯದೊಂದಿಗೆ ಏಕದಿನಕ್ಕೆ ಪದಾರ್ಪಣೆ ಮಾಡಿದ ರಸೂಲ್ ಜಮ್ಮು ಮತ್ತು ಕಾಶ್ಮೀರ ಪರ ಭಾರತ ತಂಡ ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.
ಸ್ಕೋರ್ ವಿವರ
ಬಾಂಗ್ಲಾದೇಶ 50 ಓವರುಗಳಲ್ಲಿ 9 ವಿಕೆಟ್ಗೆ 272
ತಮೀಮ್ ಸಿ ಸಹಾ ಬಿ ಯಾದವ್ 0, ಅನಾಮುಲ್ ಸಿ ರಾಯುಡು ಬಿ ರಸೂಲ್ 44, ಮೋಮಿನುಲ್ ಸಿ ಸಹಾ ಬಿ ಯಾದವ್ 6, ಮುಷ್ಫೀಕರ್ ಸಿ ರಹಾನೆ ಬಿ ರಸೂಲ್ 59, ಶಕೀಬ್ ಸಿ ಅಂಡ್ ಬಿ ರೈನಾ 52, ಮಹಮುದುಲ್ಲಾ ಬಿ ಮಿಶ್ರಾ 41, ನಾಸಿರ್ ಸಿ ರಹಾನೆ ಬಿ ಮಿಶ್ರಾ 22, ಜಿಯುರ್ ಸಿ ರೈನಾ ಬಿ ಯಾದವ್ 2, ಮಶ್ರಫೆ ಬಿ ಪಟೇಲ್ 18, ಅಬ್ದುಲ್ ಅಜೇಯ 16, ಅಲ್-ಅಮೀನ್ ಅಜೇಯ 1. ಇತರೆ: (ಲೆಗ್ಬೈ-3, ವೈ-8) 11.
ವಿಕೆಟ್ ಪತನ: 15, 2-35, 3-87, 4-134, 5-199,
6-229, 7-234, 8-235, 9-267.
ಬೌಲಿಂಗ್ ವಿವರ: ಮೋಹಿತ್ ಶರ್ಮಾ 5.4-1-23-0, ಉಮೇಶ್ ಯಾದವ್ 9-0-48-3, ರಾಬಿನ್ ಉತ್ತಪ್ಪ 0.2-0-0-0, ಅಕ್ಷರ್ ಪಟೇಲ್ 10-0-59-1, ಅಮಿತ್ ಮಿಶ್ರಾ 10-0-55-2, ಪರ್ವೇಜ್ ರಸೂಲ್ 10-0-60-2, ಸುರೇಶ್ ರೈನಾ 5-0-24-1.
ಭಾರತ 24.5 ಓವರುಗಳಲ್ಲಿ 3 ವಿಕೆಟ್ಗೆ 153
ಉತ್ತಪ್ಪ ಎಲ್ಬಿ ಬಿ ಶಕೀಬ್ 50, ರಹಾನೆ ಸಿ ಜಿಯುರ್ ಬಿ ಮಶ್ರಫೆ 64, ಪೂಜಾರ ಎಲ್ಬಿ ಬಿ ಶಕೀಬ್ 0, ರಾಯುಡು ಅಜೇಯ 16, ರೈನಾ ಅಜೇಯ 15. ಇತರೆ: (ವೈ-8) 8.
ವಿಕೆಟ್ ಪತನ: 1-99, 2-100, 3-135.
ಬೌಲಿಂಗ್ ವಿವರ: ಮಶ್ರಫೆ 5-0-25-1, ಹುಸೇನ್ 5-0-32-0, ಶಕೀಬ್ 6-0-27-2, ಅಬ್ದುರ್ 5-0-34-0, ಜಿಯುರ್ 1-0-9-0, ಮಹಮುದುಲ್ಲಾ 2.5-0-26-0.