ಭಾರತಕ್ಕೆ ಸರಣಿ ಮೇಲೆ ಕಣ್ಣು
ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಆಟಗಾರರು..
ಮೀರ್‌ಪುರ: ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಆಟಗಾರರು ಈಗ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ.
ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೆದ ಭಾನುವಾರ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡದ ವಿರುದ್ಧ ಜಯಗಳಿಸಿತು. ಈ ಗೆಲವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಮಂಗಳವಾರ ನಡೆಯಲಿರುವ ಎರಡನೇ ಪಂದ್ಯದಲ್ಲೂ ಜಯಭೇರಿ ಬಾರಿಸಿ ಸರಣಿ ವಶಕ್ಕೆ ಪಡೆಯುವ ಲೆಕ್ಕಾಚಾರದಲ್ಲಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಬಹುತೇಕ ಎರಡನೇ ದರ್ಜೆ ತಂಡವಾಗಿ ಸುರೇಶ್ ರೈನಾ ನಾಯಕತ್ವದಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿರುವ ಭಾರತ ಉತ್ತಮ ಆರಂಭವನ್ನೇ ಪಡೆದಿದೆ. ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯಾ ರಹಾನೆ ಮತ್ತು ರಾಬಿನ್ ಉತ್ತಪ್ಪ ಅರ್ಧಶತಕ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
ಇನ್ನು ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ 3 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಇತರೆ ಯುವ ಬೌಲರ್‌ಗಳು ಕೊಂಚ ದುಬಾರಿಯಾಗಿದ್ದರೂ ಸಹ ಗುಣಮಟ್ಟದ ದಾಳಿಯನ್ನೇ ನಡೆಸಿದ್ದರು.
ಮತ್ತೊಂದೆಡೆ ಮುಷ್ಫೀಕರ್ ರಹೀಂ ನಾಯಕತ್ವದ ಆತಿಥೇಯ ಬಾಂಗ್ಲಾದೇಶ ಸರಣಿ ಗೆಲ್ಲುವ ಆಸೆ ಜೀವಂತವಿರಿಸಿಕೊಳ್ಳಬೇಕಾದರೆ ಈ ಪಂದ್ಯವನ್ನು ಗೆದ್ದುಕೊಳ್ಳಲೇಬೇಕಾಗಿದೆ. ತವರಿನಲ್ಲಿಯೇ ಸರಣಿ ನಡೆಯುತ್ತಿರುವುದು ಒಂದೆಡೆಯಾದರೆ, ಭಾರತದ ಯುವಪಡೆ ವಿರುದ್ಧವೇ ಸೋಲನುಭವಿಸಿ ಮುಖಭಂಗಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಬಾಂಗ್ಲಾದೇಶ ಆಟಗಾರರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಹಾಗಾಗಿ, ಭಾರತಕ್ಕೆ ಎರಡನೇ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.
ಪಂದ್ಯ ಆರಂಭ: ಮಧ್ಯಾಹ್ನ 12.30 ಗಂಟೆ