ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

137 ಕ್ರೀಡಾಳುಗಳಿಗೆ ನಗದು ಪುರಸ್ಕಾರ

Srinivasa Murthy VN
Updated On : 3 Mar 2014, 11:37 am

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಥ್ಲೀಟ್‌ಗಳಿಗೆ ಸೋಮವಾರ ಯವನಿಕಾದಲ್ಲಿ ನಗದು ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಯುವಜನ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯ್‌ಚಂದ್ರ ಜೈನ್ ಅವರು ಪ್ರಶಸ್ತಿ ವಿತರಣೆ ಮಾಡಿದರು.      ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾದ ಹೈಜಂಪ್‌ಪಟು ಸಹನಾ ಕುಮಾರಿ, ಶಾಟ್‌ಪುಟ್‌ಪಟು ವಿಕಾಸಗೌಡ, ಈಜುತಾರೆ ಎ.ಪಿ ಗಗನ್ ಸೇರಿದಂತೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಚೆಸ್, ಶೂಟಿಂಗ್, ರೋಲರ್ ಸ್ಕೇಟಿಂಗ್, ರೋಯಿಂಗ್, ಈಜು, ವಾಟರ್ ಪೋಲೋ, ಟೆಕ್ವಾಂಡೋ, ಟೆನಿಕಾಯ್ಟ್, ವಾಲಿಬಾಲ್ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ 2009, 2010 ಹಾಗೂ 2011ರ ಸಾಲಿನಲ್ಲಿ ಸಾಧನೆ ಮಾಡಿದ ರಾಜ್ಯದ 137 ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.    ಆಯಾ ಸಾಲಿನಲ್ಲಿ ಚಿನ್ನ ಗೆದ್ದ ಕ್ರೀಡಾಪಟುಗೆ ರು. 1 ಲಕ್ಷ, ಬೆಳ್ಳಿ ಗೆದ್ದವರಿಗೆ ರು. 50,000 ಹಾಗೂ ಕಂಚು ಗೆದ್ದವರಿಗೆ ರು. 25,000 ನಗದು ಬಹುಮಾನ ನೀಡಲಾಯಿತು. ಅಲ್ಲದೆ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೂ ತಲಾ ರು. 50,000 ನಗದು ಬಹುಮಾನ ನೀಡಲಾಯಿತು. ಒಟ್ಟು ರು. 11,666,666 ಬಹುಮಾನವನ್ನು ಸರ್ಕಾರ ನೀಡಿತು.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದ ಸದಾನಂದ ಮಾಲಶೆಟ್ಟಿ, ಜಿ.ವಿ. ಗಾಂವ್ಕರ್ ಹಾಗೂ ಶಿವೇಗೌಡ ಅವರಿಗೂ ವಿಶೇಷ ಪುರುಷ್ಕಾರ ನೀಡಲಾಯಿತು.
ಸೈಕ್ಲಿಸ್ಟ್‌ಗಳಿಗೆ ಸೈಕಲ್ ವಿತರಣೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ 26 ಸೈಕ್ಲಿಂಗ್ ಪ್ರತಿಭೆಗಳಿಗೆ ಸಮಾರಂಭದಲ್ಲಿ ರೇಸ್ ಸೈಕಲ್‌ಗಳನ್ನು ವಿತರಿಸಲಾಯಿತು. ಸೈಕ್ಲಿಸ್ಟ್‌ಗಳ ಸಾಧನೆಯನ್ನು ಆಧರಿಸಿ 11 ಕ್ರೀಡಾಪಟುಗಳಿಗೆ ರು. 1,55,338 ಬೆಲೆಯ ಕಾರ್ಬನ್ ಮಾನೋಕಾಕ್ ಫ್ರೇಮ್‌ವುಳ್ಳ ಸೈಕಲ್‌ಗಳನ್ನು ಹಾಗೂ 15 ಕ್ರೀಡಾಪಟುಗಳಿಗೆ ರು. 72,162 ಬೆಲೆಯ ಅಲ್ಯೂಮಿನಿಯಂ ಫ್ರೇಮ್‌ವುಳ್ಳ ಸೈಕಲ್‌ಗಳನ್ನು ನೀಡಲಾಯಿತು.

ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. 2012, 2013ನೇ ಸಾಲಿನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೂ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು.
-ಕ್ರೀಡಾ ಸಚಿವ ಕೆ. ಅಭಯ್‌ಚಂದ್ರ ಜೈನ್

ಏಷ್ಯನ್ ಗೇಮ್ಸ್‌ಗೆ ಎಲ್ಲ ಅಥ್ಲೀಟ್‌ಗಳು ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ನಗದು ಬಹುಮಾನ ನೀಡಿರುವುದು ಸಂತಸ ತಂದಿದೆ. ಹರ್ಯಾಣದಂತಹ ರಾಜ್ಯಗಳಲ್ಲಿ ಹೆಚ್ಚಿನ ಬಹುಮಾನ ಕೊಡುತ್ತಾರೆ ನಿಜ. ಆದರೆ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲಿ ಹಲವು ವರ್ಷಗಳಿಂದ ಬಹುಮಾನ ನೀಡಿಯೇ ಇಲ್ಲ. ಹೀಗಾಗಿ ಮತ್ತೊಂದು ರಾಜ್ಯಕ್ಕೆ ಹೋಲಿಸಿಕೊಳ್ಳುವುದಕ್ಕಿಂತ, ನಮ್ಮ ಸರ್ಕಾರ ಉತ್ತೇಜನ ನೀಡುತ್ತಿದೆಯಲ್ಲ ಎಂಬುದೇ ಖುಷಿಯ ವಿಚಾರ.
-ಹೈಜಂಪ್‌ಪಟು ಸಹನಾ ಕುಮಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement