ಆಂಗ್ಲರನ್ನು ಜಯದ ಹಾದಿ ಹಿಡಿಸಿದ ರೂಟ್
ಆ್ಯಂಟಿಗುವಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಜೊ ರೂಟ್(107) ಹಾಗೂ ಜೋಸ್ ಬಟ್ಲರ್(99) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಬುಧವಾರ ಇಲ್ಲಿನ ಸರ್ ವಿವಿಎನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 25 ರನ್ಗಳ ಗೆಲವು ದಾಖಲಿಸಿತು. ಈ ಮೂಲಕ 3 ಏಕದಿನ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್, 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 303 ರನ್ ಕಲೆಹಾಕಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 47.4 ಓವರ್ಗಳಲ್ಲಿ 278 ರನ್ಗಳಿಗೆ ಆಲೌಟ್ ಆಯಿತು.
ಆಸರೆಯಾದ ರೂಟ್: ಆರಂಭಿಕ ಕುಸಿತದ ನಡುವೆಯೂ ಇಂಗ್ಲೆಂಡ್ ತಂಡ ಚೇತರಿಕೆ ಕಂಡು ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದು, ಜೊ ರೂಟ್ ಹಾಗೂ ಜೋಸ್ ಬಟ್ಲರ್.
ಆಂಗ್ಲರ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕಲ್ ಲಂಬ್ ಹಾಗೂ ಮೊಯೀನ್ ಅಲಿ ತಂಡಕ್ಕೆ 37 ರನ್ಗಳ ಆರಂಭ ನೀಡಿದರು. ನಂತರ ಸತತ ಎರಡು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಆಗ ಕ್ರೀಸ್ಗಿಳಿದ ಜೊ ರೂಟ್(107 ರನ್, 122 ಎಸೆತ, 7 ಬೌಂಡರಿ) ಇಂಗ್ಲೆಂಡ್ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಐದನೇ ವಿಕೆಟ್ಗೆ ರೂಟ್ ಜತೆಗೂಡಿದ ಜೋಸ್ ಬಟ್ಲರ್(99 ರನ್, 84 ಎಸೆತ, 7 ಬೌಂಡರಿ, 4 ಸಿಕ್ಸರ್) ತಂಡಕ್ಕೆ 175 ರನ್ಗಳ ಅತ್ಯುತ್ತಮ ಜತೆಯಾಟ ನೀಡಿದರು. ಈ ಜತೆಯಾಟದಿಂದ ಇಂಗ್ಲೆಂಡ್ ತಂಡ 300ರ ಗಡಿ ದಾಟಲು ನೆರವಾಯಿತು.
ಇನ್ನು ವೆಸ್ಟ್ ಇಂಡೀಸ್ ತಂಡದ ಪರ 3 ವಿಕೆಟ್ ಪಡೆದ ಡ್ವೈನ್ ಬ್ರಾವೊ ಯಶಸ್ವಿ ಬೌಲರ್ ಎನಿಸಿದರು.
ವ್ಯರ್ಥವಾದ ರಾಮ್ದಿನ್ ಹೋರಾಟ: ಬೃಹತ್ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೇ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಕಳೆದುಕೊಳ್ಳುತ್ತಾ ಒತ್ತಡಕ್ಕೆ ಸಿಲುಕಿತು. ಆದರೆ ವೆಸ್ಟ್ ಇಂಡೀಸ್ನ ಹೋರಾಟಕ್ಕೆ ಜೀವ ತುಂಬಿದ್ದು, ವಿಕೆಟ್ ಕೀಪರ್ ದಿನೇಶ್ ರಾಮ್ದಿನ್.
43 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲಿಕಿದ್ದ ಸಮಯದಲ್ಲಿ ಕಣಕ್ಕಿಳಿದ ರಾಮ್ದಿನ್(128 ರನ್, 109 ಎಸೆತ, 12 ಬೌಂಡರಿ 5 ಸಿಕ್ಸರ್) ಸತಕ ದಾಖಲಿಸಿದರಾದರೂ ತಂಡವನ್ನು ಗೆಲವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ರಾಮ್ದಿನ್ ಹೊರತು ಪಡಿಸಿದಂತೆ ಉಳಿದ ಯಾವುದೇ ಬ್ಯಾಟ್ಸ್ಮನ್ ಸಹ 30 ರನ್ಗಳ ಗಡಿ ದಾಟಲಿಲ್ಲ. ಹಾಗಾಗಿ ರಾಮ್ದಿನ್ಗೆ ತಕ್ಕ ಸಾಥ್ ದೋರೆಯಲಿಲ್ಲ. ಪರಿಣಾಮ ವಿಂಡೀಸ್ ಪಂದ್ಯದಲ್ಲಿ ಮುಖಭಂಗ ಅನುಭವಿಸುವಂತಾಯಿತು.
ಇಂಗ್ಲೆಂಡ್ ತಂಡದ ಪರ ಬ್ರೆಸ್ನನ್ 3 ಹಾಗೂ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 50 ಓವರ್ಗಳಲ್ಲಿ 6 ವಿಕೆಟ್ಗೆ 303
(ಜೊ ರೂಟ್ 107, ಜೋಸ್ ಬಟ್ಲರ್ 99, ಡ್ವೈನ್ ಬ್ರಾವೊ 60ಕ್ಕೆ3)
ವೆಸ್ಟ್ ಇಂಡೀಸ್ 47.4 ಓವರ್ಗಳಲ್ಲಿ 278
(ದಿನೇಶ್ ರಾಮ್ದಿನ್ 128, ಡ್ವೈನ್ ಬ್ರಾವೊ 27, ಬ್ರೆಸ್ನನ್ 45ಕ್ಕೆ3).