ಗೆದ್ದ ಸೈನಾ, ಸಿಂಧುಗೆ ಸೋಲು
ಬರ್ಮಿಂಗ್‌ಹ್ಯಾಮ್: ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದು, ಭಾರತದ ಪರ ಏಕೈಕ ಹೋರಾಟ ನಡೆಸುತ್ತಿದ್ದಾರೆ.
ಗುರುವಾರ ಇಲ್ಲಿನ ನ್ಯಾಷನಲ್ ಇಂಡೋರ್ ಅರೇನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ತಮ್ಮ ಎದುರಾಳಿ ಸ್ಕಾಟ್ಸೆಂಡ್‌ನ ಕ್ರಿಸ್ಟಿ ಗಿಲ್ಮೊರ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಇನ್ನು ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು ತಮ್ಮ ಪಂದ್ಯದಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ.
ದಿನದಾಟದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಭಾರತದ ಪಾಳಯಕ್ಕೆ ಸೈನಾ ಗೆಲವು ಕೊಂಚ ನೆಮ್ಮದಿ ನೀಡಿದಂತಾಗಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್, ಕೆ.ಶ್ರೀಕಾಂತ್ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ತರುಣ್ ಕೋನಾ ಅವರು ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಈ ಕಹಿ ಅನುಭವದ ನಂತರ ಸೈನಾ ಗೆಲವು ಸಾಧಿಸಿದ್ದು, ಭಾರತೀಯ ಪಡೆಯಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕೇವಲ 32 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 23 ವರ್ಷದ ಸೈನಾ ನೆಹವಾಲ್ ಪಂದ್ಯದ ಆರಂಭದಿಂದಲೂ ಎದುರಾಳಿ ಮೇಲೆ ಪ್ರಭುತ್ವ ಸಾಧಿಸಿದರು. ಪರಿಣಾಮ ಪಂದ್ಯದಲ್ಲಿ 21-15, 21-6 ಸೆಟ್‌ಗಳ ಅಂತರದಲ್ಲಿ ಸುಲಭ ಗೆಲವು ದಾಖಲಿಸಿದರು. ಸೈನಾ ದಾಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಗಿಲ್ಮೊರ್ ತಲೆಬಾಗಿದರು.
ಇನ್ನು ವಿಶ್ವದ ನಂ.10ನೇ ಆಟಗಾರ್ತಿ ಪಿ.ವಿ ಸಿಂಧು, ಇದೇ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು ಉತ್ತಮ ಫಲಿತಾಂಶ ಕಾಣುವಲ್ಲಿ ವಿಫಲರಾಗಿದ್ದಾರೆ. 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿಚೀನಾದ ಸನ್ ಯು ವಿರುದ್ಧ ಕಾದಾಟ ನಡೆಸಿದ ಸಿಂಧು, 16-21, 15-21 ಸೆಟ್‌ಗಳ ಅಂತರದಲ್ಲಿ ಮಣಿದರು. ಇದಕ್ಕು ಮೊದಲು ಸನ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಸಿಂಧು ಎರಡರಲ್ಲಿ ಗೆಲವು ದಾಖಲಿಸಿ ಒಂದರಲ್ಲಿ ಸೋಲನುಭವಿಸಿದ್ದರು. ಈ ಪಂದ್ಯದಲ್ಲಿ ಸಿಂಧು ಗೆಲ್ಲುವ ನಿರೀಕ್ಷೆ ಇತ್ತಾದರೂ ಅದು ಸಾಧ್ಯವಾಗಲಿಲ್ಲ.
ಈ ಮೂಲಕ ಸಾನಾ ನೆಹವಾಲ್ ಮಾತ್ರ ಪಂದ್ಯಾವಳಿಯಲ್ಲಿ ಮುಂದುವರಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಸೈನಾ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಯುಎಸ್‌ಎನ ಬೈವೆನ್ ಜಾಂಗ್ ಅವರನ್ನು ಎದುರಿಸಲಿದ್ದಾರೆ.