ತಂಡಕ್ಕೆ ಹೊರೆಯಾದ ದಿನವೇ ನಿವೃತ್ತಿ: ಶಾಹಿದ್ ಅಫ್ರಿದಿ
ಮೀರ್ಪುರ: ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ರೋಚಕ ಜಯ ಕಾಣಲು ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಆಲ್ರೌಂಡರ್ ಶಾಹಿದ್ ಅಫ್ರಿದಿ, ತಂಡಕ್ಕೆ ನಾನು ಹೊರೆಯಾದ ದಿನವೇ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ನಿವೃತ್ತಿ ವಿಷಯವನ್ನು ನಾನು ಪಕ್ಕಕ್ಕಿಟ್ಟಿದ್ದೇನೆ. ತಂಡಕ್ಕೆ ಹೊರೆಯಾಗುತ್ತಿದ್ದೇನೆ ಎಂದ ದಿನ ನಿವೃತ್ತಿ ಬಗ್ಗೆ ಚಿಂತಿಸುತ್ತೇನೆ. ಬೆರೆಯವರು ನನ್ನ ನಿವೃತ್ತಿ ಬಗ್ಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ನಾನು ಫಿಟ್ ಆಗಿರುವ ಕಾಲ ಕ್ರಿಕೆಟ್ಗಾಗಿ ಜೀವವನ್ನು ಅರ್ಪಿಸುತ್ತೇನೆ ಎಂದು ಅಫ್ರಿದಿ ತಿಳಿಸಿದ್ದಾರೆ.
ನನ್ನ ಪ್ರದರ್ಶನದ ಮೂಲಕ ದೇಶಕ್ಕೆ ಕಾಣಿಕೆ ನೀಡಲು ಬಯಸುತ್ತೇನೆ. ಪ್ರತಿ ದಿನವು ಹೆಚ್ಚು ರನ್ ದಾಖಲಿಸಲು ಸಾಧ್ಯವಿಲ್ಲ. ನಾನು ಬೌಲಿಂಗ್ ಬಗ್ಗೆಯೂ ಗಮನ ಹರಿಸುತ್ತಿದ್ದೇನೆ.
ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಾಣಿಕೆ ನೀಡಲು ಸಿದ್ಧನಾಗಿರುತ್ತೇನೆ ಎಂದು ಅಫ್ರಿದಿ ತಿಳಿಸಿದ್ದಾರೆ.
ಈ ಮಟ್ಟದಲ್ಲಿ ಇಷ್ಟು ವರ್ಷಗಳ ಕಾಲ ಆಡುತ್ತಿದ್ದು, ನನಗೆ ಬೇರೆ ಕೋಚ್ ಅಗತ್ಯವಿಲ್ಲ. ನನಗೆ ನಾನೇ ಉತ್ತಮ ಕೋಚ್ ಆಗಿದ್ದೇನೆ. ಆದರೆ ನಮಗೆ ಬೆಂಬಲ ನೀಡುವ ವ್ಯಕ್ತಿಗಳು ನಮ್ಮ ಸುತ್ತ ಇರುವುದು ಪ್ರಮುಖ ಎಂದು ಅಭಿಪ್ರಾಯಪಟ್ಟಿದ್ದಾರೆ.