ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸುಪ್ರೀಂನಲ್ಲಿ ಐಪಿಎಲ್ ವಿಚಾರಣೆ

Srinivasa Murthy VN
Updated On : 7 Mar 2014, 12:45 pm

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರದ ಕುರಿತು, ಮುಕುಲ್ ಮುದ್ಗಲ್ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶುಕ್ರವಾರದಿಂದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಸಮಿತಿ ಫೆಬ್ರವರಿ 10ರಂದು ತನ್ನ ವರದಿಯನ್ನು ಸಲ್ಲಿಸಿತ್ತು.
ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಮುದ್ಗಲ್ ನೇತೃತ್ವದ ಮೂರು ಸದಸ್ಯರ ಸಮಿತಿ, ಬಿಸಿಸಿಐ ಅಧ್ಯಕ್ಷ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿ ಮಾಹಿತಿ ರವಾನೆ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಪಂದ್ಯಾವಳಿಯ ಸಂದರ್ಭ ಮೇಯಪ್ಪನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಆದರೆ, ಮೇಯಪ್ಪನ್ ತಂಡದಲ್ಲಿ ಇರಲೇ ಇಲ್ಲ ಎಂದು ಎನ್. ಶ್ರೀನಿವಾಸನ್ ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಸಹ ವರದಿಯಲ್ಲಿ ತಿಳಿಸಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರು ಬುಕ್ಕಿಗಳ ಮೂಲಕ ಐಪಿಎಲ್‌ನಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಜುಲೈನಲ್ಲಿ ಐಪಿಎಲ್ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ಬಿಸಿಸಿಐ, ಇಬ್ಬರು ನಿವೃತ್ತ ನ್ಯಾಯಾಧೀಶರಾದ ಟಿ. ಜಯರಾಮ್ ಚೌಟಾ ಮತ್ತು ಆರ್ ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾ ಭ್ರಷ್ಟಾಚಾರ ಕುರಿತ ಯಾವುದೇ ಸಾಕ್ಷ್ಯಗಳನ್ನು ಹುಡುಕುವಲ್ಲಿ ವಿಫಲವಾಗಿತ್ತು.
ಗುರುನಾಥ್ ಮೇಯಪ್ಪನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಇದುವರೆಗೂ ಐಸಿಸಿ ಮತ್ತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆ ತನಿಖೆ ನಡೆಸಿಲ್ಲ. ಚೆನ್ನೈ ಪೊಲೀಸ್ ಅಪರಾಧ ಪತ್ತೆ ತನಿಖಾ ವಿಭಾಗ ಸಹ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿಲ್ಲ. ಈ ಕುರಿತು ವಿವರವಾಗಿ ತನಿಖೆ ನಡೆಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಸಹ ಮುದ್ಗಲ್ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಕುರಿತು ಗುರುನಾಥ್ ಈಗಾಗಲೇ ಮುಂಬೈ ಪೊಲೀಸರ ಎದುರಿಗೆ ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ಅವರನ್ನು ಬಂಧಿಸಿದಾಗಲೇ ಈ ಸತ್ಯ ಬಯಲಾಗಿತ್ತು. ಆತ ಹೇಳಿರುವ ಹೇಳಿಕೆ ಧ್ವನಿ ಮುದ್ರಣ ಮುಂಬೈ ಪೊಲೀಸರ ಬಳಿ ಇದೆ. ಆದರೆ, ಅದನ್ನು ಇದುವರೆಗೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಕಾರಣ ಅದನ್ನು ವಿಧಿವಿಜ್ಞಾನ ಪರೀಕ್ಷೆಗೂ ಕಳುಹಿಸಿಕೊಡಲಾಗಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಲ್. ನಾಗೇಶ್ವರ ರಾವ್ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆ ಸದಸ್ಯ ನಿಲಯ ದತ್ ಅವರು ಮುದ್ಗಲ್ ಸಮಿತಿ ಇತರ ಇಬ್ಬರು ಸದಸ್ಯರಾಗಿದ್ದಾರೆ. ಗುರುನಾಥ್ ವಿರುದ್ಧ ಭ್ರಷ್ಚಾಚಾರದ ಆರೋಪಗಳ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಲು ಅಕ್ಟೋಬರ್ 2013ರಲ್ಲೇ ಸಮಿತಿಯನ್ನು ರಚಿಸಲಾಗಿತ್ತು. ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದಾರೆ ಹಾಗೂ ಆಟಗಾರರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದ್ದವು.
ಬಿಸಿಸಿಐ ನೇಮಿಸಿದ್ದ ಇಬ್ಬರು ಸದಸ್ಯರ ತನಿಖಾ ಸಮಿತಿ ವಿರುದ್ಧ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮಾ ಅವರು ಸ್ವಹಿತಾಸಕ್ತಿಯ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿತ್ತು. ನಂತರ ಮುಂಬೈ ಹೈಕೋರ್ಟ್ ಬಿಸಿಸಿಐ ತನಿಖಾ ಸಮಿತಿಯೇ ಅಕ್ರಮ ಎಂದು ಹೇಳಿತ್ತು. ನಂತರ ಬಿಸಿಸಿಐ ಮತ್ತು ಬಿಹಾರ ಕ್ರಿಕೆಟ್ ಸಂಸ್ಥೆ ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲ್ಲದೆ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಬೇಕು ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement