ಕ್ವಾರ್ಟರ್ನಲ್ಲಿ ಕೈಚೆಲ್ಲಿದ ಸೈನಾ
ಬರ್ಮಿಂಗ್ಹ್ಯಾಮ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಇಂಗ್ಲೆಂಡ್ನ ರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೈನಾ, ಚೀನಾದ ಶಿಕ್ಸಿಯಾನ ವಾಂಗ್ ವಿರುದ್ಧ 17-21, 10-21 ನೇರ ಗೇಮ್ಗಳಿಂದ ಸೋಲನುಭವಿಸಿದರು. 7ನೇ ರ್ಯಾಂಕಿಂಗ್ ಹೊಂದಿರುವ ಭಾರತದ ಸೈನಾ ಅವರ ಆಟ, ವಿಶ್ವದ 3ನೇ ನಂಬರ್ ಆಟಗಾರ್ತಿ ಚೀನಾದ ಶಿಕ್ಸಿಯಾನ ವಿರುದ್ಧ ನಡೆಯಲಿಲ್ಲ.
ಈ ಜಯದೊಂದಿಗೆ ಶಿಕ್ಸಿಯಾನ ಅವರು ಸೈನಾ ವಿರುದ್ಧ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಸೋತರೆ, 4ರಲ್ಲಿ ಗೆದ್ದ ದಾಖಲೆ ಹೊಂದಿದ್ದಾರೆ.
ಶಿಕ್ಸಿಯಾನ ಅವರು ಈಗ ಸೆಮಿಫೈನಲ್ ಪಂದ್ಯದಲ್ಲಿ ತಮ್ಮದೇ ದೇಶದವರಾದ, ವಿಶ್ವದ ಮಾಜಿ ಚಾಂಪಿಯನ್ ಯಿಹಾನ್ ವಾಂಗ್ ವಿರುದ್ಧ ಸೆಣಸಲಿದ್ದಾರೆ. ಈ ಸೋಲಿನೊಂದಿಗೆ ಸೈನಾ ಅವರು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ. 2010 ಮತ್ತು 2013ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಸೈನಾ ಅವರ ಶ್ರೇಷ್ಠ ಸಾಧನೆಯಾಗಿದೆ.
ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ಅವರು ಮಾತ್ರ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಗೆದ್ದ ಭಾರತದ ಆಟಗಾರರು ಎನಿಸಿದ್ದಾರೆ.
ಸ್ವಿಸ್ನಲ್ಲಿ 6ನೇ ಶ್ರೇಯಾಂಕ: ಸೈನಾ ನೆಹ್ವಾಲ್ 2 ಬಾರಿ ಗೆದ್ದುಕೊಂಡಿರುವ ಮತ್ತು ಮಂಗಳವಾರದಿಂದ ಆರಂಭವಾಗಲಿರುವ ಸ್ವಿಸ್ ಓಪನ್ ಗ್ರ್ಯಾನ್ ಪ್ರಿಕ್ಸ್ನಲ್ಲಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. 2011 ಮತ್ತು 2012ರಲ್ಲಿ ಸ್ವಿಸ್ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಸೈನಾ, ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಕಳೆದ ವರ್ಷ ಅವರು ಸೆಮಿಫೈನಲ್ ಪ್ರವೇಶಿಸಿದ್ದರು. ಇನ್ನು ಮಹಿಳೆಯರ ಸಿಂಗಲ್ಸ್ನಲ್ಲೇ ಭಾಗವಹಿಸುತ್ತಿರುವ ಪಿ.ವಿ ಸಿಂಧು ಅವರು 7ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಸೈಲಿ ರಾಣೆ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸುತ್ತಿರುವ ಭಾರತದ ಇನ್ನೊಬ್ಬ ಆಟಗಾರ್ತಿ ಎನಿಸಿದ್ದಾರೆ.ಏತನ್ಮಧ್ಯೆ, ಫಾರ್ಮ್ ಕಳೆದುಕೊಂಡಿರುವ ಪರುಪಳ್ಳಿ ಕಶ್ಯಪ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 3ನೇ ಶ್ರೇಯಾಂಕ ಪಡೆದರೆ, ಕಿದಂಬಿ ಶ್ರೀಕಾಂತ್ 5ನೇ ಶ್ರೇಯಾಂಕ ಪಡೆದಿದ್ದಾರೆ. ಮುಂಬೈನ ಆನಂದ್ ಪವಾರ್ ಅವರು ಸ್ಪರ್ಧೆಯಲ್ಲಿರುವ ಭಾರತದ ಇನ್ನೊಬ್ಬ ಆಟಗಾರ ಎನಿಸಿದ್ದಾರೆ.