ಫೆಡರರ್-ವಾವ್ರಿಂಕಾಗೆ ಸೋತ ಬೋಪಣ್ಣ-ಖುರೇಶಿ ಜೋಡಿ
ಇಂಡಿಯಾನ ವೆಲ್ಸ್: ಆಸ್ಟ್ರೇಲಿಯನ್ ಓಪನ್ ಗೆಲವಿನ ನಂತರ ಉತ್ತಮ ಫಾರ್ಮ್ ಮುಂದುವರಿಸಿರುವ ಸ್ಟಾನಿಸ್ಲಾಸ್ ವಾವ್ರಿಂಕಾ, ತಮ್ಮ ಜತೆಗಾರ ರೋಜರ್ ಫೆಡರರ್ ಜತೆಗೂಡಿ ಇಂಡಿಯಾನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿಯನ್ನು ಮಣಿಸಿದೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಾವ್ರಿಂಕಾ ಹಾಗೂ ಫೆಡರರ್, ತಮ್ಮ ಎದುರಾಳಿ ಆರನೇ ಶ್ರೇಯಾಂಕ ಪಡೆದಿದ್ದ ರೋಹನ್ ಬೋಪಣ್ಣ ಹಾಗೂ ಐಸಾಮ್ ಉಲ್ ಹಕ್ ಖುರೇಶಿ ಜೋಡಿಯನ್ನು 6-2, 6-7(4-7), 10-6 ಸೆಟ್‌ಗಳ ಅಂತರದಲ್ಲಿ ಮಣಿಸಿದರು.
ಬೋಪಣ್ಣ ಹಾಗೂ ಖುರೇಶಿ ಜೋಡಿ ಕಳೆದ ವಾರ ಮುಕ್ತಾಯಗೊಂಡ ದುಬೈ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಈ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರಗುಳಿದಿರುವುದು ನಿರಾಸೆ ಮೂಡಿಸಿದೆ.
ಪಂದ್ಯದ ಆರಂಭದಲ್ಲೇ ವಾವ್ರಿಂಕಾ ಹಾಗೂ ಫೆಡರರ್ ಜೋಡಿ ನಿಯಂತ್ರಣ ಸಾಧಿಸಿತು. ಪರಿಣಾಮ ಮೊದಲ ಸೆಟ್ ಅನ್ನು 6-2 ಅಂತರದಲ್ಲಿ ತಮ್ಮದಾಗಿಸಿಕೊಂಡರು. ಇನ್ನು ಎರಡನೇ ಸೆಟ್‌ನಲ್ಲಿ ಹೋರಾಟ ನೀಡಿದ ಬೋಪಣ್ಣ ಜೋಡಿ ಪ್ರಬಲ ಪ್ರತಿರೋಧದ ನಡುವೆಯೂ 7-6(7-4) ಅಂತರದಲ್ಲಿ ಮೇಲುಗೈ ಸಾಧಿಸಿ, ಪಂದ್ಯದಲ್ಲಿ ಸಮಬಲ ಕಂಡುಕೊಂಡರು. ಇನ್ನು ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ ಮತ್ತೆ ನಿಯಂತ್ರಣ ಸಾಧಿಸಿದ ವಾವ್ರಿಂಕಾ ಜೋಡಿ 10-6 ಅಂತರದ ಮುನ್ನಡೆ ಪಡೆದು ಪಂದ್ಯದಲ್ಲಿ ಗೆಲವಿನ ನಗೆ ಬೀರಿದರು.
ಡೆವಿಸ್ ಕಪ್ ಪಂದ್ಯಾವಳಿಯ ನಂತರ ನಾನು ಸುಮಾರು ಮೂರುವರೆ ವಾರಗಳ ಕಾಲ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ನಾನು ಅಭ್ಯಾಸ ನಡೆಸುತ್ತಿದ್ದೆ. ಈಗ ಈ ಪಂದ್ಯದಲ್ಲಿ ಗೆಲವು ದಾಖಲಿಸಿರುವುದು ಸಂತಸ ತಂದಿದೆ. ನಾನು ಮತ್ತೆ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಬಗ್ಗೆ ಖಚಿತವಾಗಿ ಹೇಳಲಾರೆ. ಈ ಹಾದಿ ಹೆಚ್ಚು ಕಠಿಣವಾಗಲಿದೆ. ಈಗ ನಾನು ಈ ಮಟ್ಟದಲ್ಲಿ ಮುಂದುವರಿಯಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ ಎಂದು ವಾವ್ರಿಂಕಾ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಪ್ರಯತ್ನ ನಡೆಸಲು ಸದಾ ಸಿದ್ಧವಾಗಿರಬೇಕು. ಈ ಸಾಲಿನಲ್ಲಿ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ವಾವ್ರಿಂಕಾ ಹಾಗೂ ರೋಜರ್ ಫೆಡರರ್ ಜೋಡಿಯು 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿತ್ತು. ನಂತರ 2011ರ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದರು.