ಡಂಕನ್ ಫ್ಲೆಚರ್ ಬದಲು ಯುವ ಕೋಚ್ ತನ್ನಿ: ಗವಾಸ್ಕರ್
ನವದೆಹಲಿ: ಕಳೆದ ಕೆಲವು ಸರಣಿಗಳಲ್ಲಿ ಭಾರತ ತಂಡ ಸತತ ಸೋಲಿನ ಕಹಿ ಸವಿದಿರುವ ಹಿನ್ನಲೆಯಲ್ಲಿ ತಂಡದ ಕೋಚ್ ಸ್ಥಾನದಿಂದ ಡಂಕನ್ ಫ್ಲೆಚರ್ ಅವರನ್ನು ತೆಗೆದು ಹಾಕಲು ಇದು ಉತ್ತಮ ಸಮಯ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ನೆಲದಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಕೋಚ್ ಫ್ಲೆಚರ್ ತಲೆ ದಂಡದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ಭಾರತ ತಂಡಕ್ಕೆ ಯುವ ಕೋಚ್ ಅಗತ್ಯವಿದೆ. ಆದರೆ ಕೋಚ್ ಜವಾಬ್ದಾರಿ ಹೊರುವ ವ್ಯಕ್ತಿ ತರಬೇತುದಾರನಾಗಿ ಅನುಭವ ಹೊಂದಿರಬೇಕು ಎಂದು ಗವಾಸ್ಕರ್ ತಿಳಿಸಿದ್ದಾರೆ.
ಭಾರತ ತಂಡದ ಜತೆ ಸೇರಿ ಉತ್ತಮ ರೀತಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಯುವ ಕೋಚ್ನ್ಗತ್ಯ ಭಾರತ ತಂಡಕ್ಕಿದೆ. ಕೇವಲ ತಂಡದ ಕೋಚ್ ಆಗಿ ಸ್ವಲ್ಪ ಮಟ್ಟಿನ ಸುಧಾರಣೆ ತರಲು ಪ್ರಯತ್ನಿಸುವ ಬಗ್ಗೆ ಚಿಂತಿಸುವ ಕೋಚ್ ಅಗತ್ಯವಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.ಆಸ್ಟ್ರೇಲಿಯಾ ತಂಡದಲ್ಲಿ ಶೇನ್ ವಾರ್ನ್ ಕೋಚ್ ಆಗಿ ಹೆಚ್ಚು ಪರಿಣಾಮಕಾರಿಯಾಗದಿದ್ದರೂ, ಡಾರೆನ್ ಲೇಮನ್ ತಂಡವನ್ನು ಉತ್ತಮ ರೀತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಸುತ್ತಿದ್ದಾರೆ. ಭಾರತ ತಂಡಕ್ಕೂ ಅದೇ ರೀತಿ ಪ್ರಭಾವ ಬೀರುವ ಕೋಚ್ ಅಗತ್ಯವಿದೆ ಎಂದಿದ್ದಾರೆ.
ಭಾರತ ತಂಡದ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟರ್ನ್ ಹೆಚ್ಚು ಪ್ರಭಾವ ಬೀರಿದ್ದರು.
ಗ್ಯಾರಿ ಎಲ್ಲಾ ಮಾದರಿಯಲ್ಲೂ ತಂಡದ ಮೇಲೆ ಪರಿಣಾಮ ಬೀರಿದ್ದರು. ಹಾಗಾಗಿ ತಂಡದ ಪ್ರತಿಯೊಬ್ಬ ಆಟಗಾರನೂ ಅವರಿಗೆ ಗೌರವ ನೀಡುತ್ತಿದ್ದರು. ಗ್ಯಾರಿ ಅಭ್ಯಾಸ ಅವಧಿಯ ಮಹತ್ವ ಚೆನ್ನಾಗಿ ಅರಿತಿದ್ದರು. ಆತ ಕೋಚ್ ಆಗಿದ್ದ ಸಮಯದಲ್ಲಿ ತಂಡದ ಅಭ್ಯಾಸ ಹೆಚ್ಚು ಸ್ಪರ್ಧಾತ್ಮಕವಾಗಿತ್ತು. ಅಲ್ಲದೆ ಪ್ರತಿಯೊಬ್ಬ ಆಟಗಾರನೂ ಅಭ್ಯಾಸದ ವೇಳೆ ಆನಂದವಾಗಿ ಹಾಗೂ ಹೆಚ್ಚಿನ ಪರಿಶ್ರಮ ಹಾಕುತ್ತಿದ್ದರು. ಆತ ಭಾರತ ತಂಡವನ್ನು ಬಿಟ್ಟು ಹೋದ ನಂತರ ತಂಡ ಸ್ವಾಲ್ಪ ಮಟ್ಟಿಗೆ ಹಾದಿ ತಪ್ಪಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು 2015ರ ವಿಶ್ವಕಪ್ ಬಗ್ಗೆ ಮಾತನಾಡಿರುವ ಗವಾಸ್ಕರ್, ಭಾರತ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡ ಮುಂದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದಿದ್ದಾರೆ.