ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಿಜೋರಾಮ್ ಮುಡಿಗೆ ಮುಕುಟ

Srinivasa Murthy VN
Updated On : 10 Mar 2014, 12:27 pm

ಸಿಲಿಗುರಿ: ಇದೇ ಮೊದಲ ಬಾರಿಗೆ ಸಂತೋಷ್ ಟ್ರೋಫಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸನ್ನು ಹೊತ್ತಿದ್ದ ಮಿಜೋರಾಮ್ ಫುಟ್ಬಾಲ್ ತಂಡ ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾನುವಾರ ನಡೆದ ಸಂತೋಷ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪ್ರಬಲ ರೈಲ್ವೇಸ್ ವಿರುದ್ಧ ಕಾದಾಟ ನಡೆಸಿದ ಮಿಜೋರಾಮ್ 3-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಈ ಮೂಲಕ ಮಿಜೋರಾಮ್ ತಂಡ 48 ವರ್ಷಗಳ ನಂತರ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಪಂದ್ಯಾವಳಿಯಲ್ಲಿ ಸತತ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮ ಲಯದಲ್ಲಿದ್ದ ಮಿಜೋರಾಮ್, ಪ್ರಸಸ್ತಿ ಸುತ್ತಿನಲ್ಲೂ ಪ್ರಭುತ್ವ ಸಾಧಿಸಿ ಅರ್ಹ ಜಯ ಸಂಪಾದಿಸಿತು.
ಮಿಜೋರಾಮ್ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ಜಿಕೊ ಜೊರೆಮಸಾಂಗಾ 2 ಹಾಗೂ ಲಾಲ್ರಿನ್‌ಪುಯಾ 1 ಗೋಲು ದಾಖಲಿಸುವ ಮೂಲಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಪ್ರಬಲ ಹೋರಾಟ ನಡೆಸಿದವು. ಹಾಗಾಗಿ ಆರಂಭದಲ್ಲಿ ಗೋಲು ದಾಖಲಾಗಲಿಲ್ಲ. ಮೊದಲ ಅವಧಿಯ ಅಂತ್ಯದಲ್ಲಿ 44ನೇ ನಿಮಿಷದಲ್ಲಿ ಮಿಜೋರಾಮ್ ಪರ ಚುರುಕಿನ ಆಟ ಪ್ರದರ್ಶಿಸಿದ ಜಿಕೊ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಹಾಗಾಗಿ ಮಿಜೋರಾಮ್ ಮೊದಲ ಅವಧಿಯಲ್ಲಿ 1-0 ಅಂತರದ ಮುನ್ನಡೆ ಪಡೆಯಿತು.
ಇನ್ನು ಪಂದ್ಯದ ಎರಡನೇ ಅವಧಿಯಲ್ಲೂ ತನ್ನ ನಿಯಂತ್ರಣ ಮುಂದುವರಿಸಿದ ಮಿಜೋರಾಮ್, ಈ ಅವಧಿಯಲ್ಲಿ ಮತ್ತೆ 2 ಗೋಲು ದಾಖಲಿಸಿತು. 61ನೇ ನಿಮಿಷದಲ್ಲಿ ತಂಡಕ್ಕೆ ನೆರವಾದ ಜಿಕೊ ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಇನ್ನು ಪಂದ್ಯದ ಅಂತಿಮ ಹಂತದಲ್ಲಿ 90ನಿಮಿಷದ ಹೆಚ್ಚುವರಿಯ ಮೊದಲ ನಿಮಿಷದಲ್ಲಿ ಲಾಲ್ರಿನ್‌ಪುಯಾ ಗೋಲು ದಾಖಲಿಸಿ ತಂಡದ ಗೆಲವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement