ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈನಾಗೆ ಗಂಗೂಲಿ ಸಲಹೆ

Srinivasa Murthy VN
Updated On : 10 Mar 2014, 12:26 pm

ನವದೆಹಲಿ: ಫಾರ್ಮ್ ಕಳೆದುಕೊಂಡು ಭಾರತ ತಂಡದಿಂದ ಹೊರಗುಳಿದಿರುವ ಸುರೇಶ್ ರೈನಾ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿಗೆ ಸಿದ್ಧತೆ ನಡೆಸುತ್ತಿದ್ದು, ಈ ವಿಶ್ವಕಪ್‌ಗೆ ತೆರಳುವ ಮುನ್ನ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಂದ ಸಲಹೆ ಪಡೆದಿದ್ದಾರೆ.
ರೈನಾ ತನ್ನ ಕಳೆದ 24 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಅರ್ಧ ಶತಕ ಬಾರಿಸಿದ್ದು, ಕಳಪೆ ಫಾರ್ಮ್‌ನಿಂದ ಪರದಾಡುತ್ತಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿತ್ತು. ನಂತರ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಗೂ ರೈನಾ ತಂಡದಿಂದ ಹೊರಗುಳಿಯಬೇಕಾಯಿತು.
ತಂಡಕ್ಕೆ ಮತ್ತೆ ಮರಳಲು ಕಠಿಣ ಪರಿಶ್ರಮ ಹಾಕುತ್ತಿರುವ ರೈನಾ, ಶಾರ್ಟ್ ಪಿಚ್ ಎಸೆತವನ್ನು ನಿಯಂತ್ರಿಸುವ ಹಾಗೂ ಇತರೆ ಬ್ಯಾಟಿಂಗ್ ಸಲಹೆಗಳನ್ನು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಂದ ಪಡೆದಿದ್ದಾರೆ. ನಾವು ಹಿನ್ನಡೆ ಅನುಭವಿಸಿದಾಗ ಅಥವಾ ತಂಡದಿಂದ ಹೊರಗುಳಿದಾಗ ನಮಗೆ ಯಾರು ಸಹಾಯ ಮಾಡಲು ಸಿದ್ಧರಿದ್ದಾರೆ. ಯಾರು ನಿಮ್ಮನ್ನು ಸ್ನೇಹದಿಂದ ಹಾಗೂ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ ಎಂಬುದು ಅರಿವಾಗುತ್ತದೆ ಎಂದು ಸುರೇಶ್ ರೈನಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಸೌರವ್ ಗಂಗೂಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಅವರೊಂದಿಗೆ ಮಾತನಾಡಿದಾಗ ಅವರು ಸಹಾಯ ಮಾಡಲು ಉತ್ಸುಕರಾದರು. ನಾವಿಬ್ಬರು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಅಲ್ಲದೆ ಗಂಗೂಲಿ ನಾನು ಫುಟ್‌ವರ್ಕ್ ಹಾಗೂ ನನ್ನ ಮನಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಗಂಗೂಲಿ ಒರ್ವ ಉತ್ತಮ ಬ್ಯಾಟಿಂಗ್ ಕೋಚ್. ಒತ್ತಡಕ್ಕೆ ಸಿಲುಕಿದ ಸಮಯದಲ್ಲಿ ನನ್ನನ್ನು ಹುರಿದುಂಬಿಸಿ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ನಮ್ಮಿಬ್ಬರ ಬ್ಯಾಟಿಂಗ್ ಶೈಲಿಯಲ್ಲಿ ಹೋಲಿಕೆ ಇದೆ. ಹಾಗಾಗಿ ಅವರೊಂದಿಗೆ ಸಾಕಷ್ಟು ವಿಷಯದ ಬಗ್ಗೆ ಸಲಹೆ ಪಡೆದೆ. ಶಾರ್ಟ್ ಪಿಚ್ ಎಸೆತವನ್ನು ಎದುರಿಸುವುದು, ನನ್ನ ಫುಟ್‌ವರ್ಕ್ ಬಗ್ಗೆ ಸಲಹೆ ನೀಡದರು. ನನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಲು ಸೂಚನೆ ನೀಡಿದರು. ಹಾಗಾಗಿ ದಾದ ಜತೆ ಮಾತನಾಡಿದ ನಂತರ ನನ್ನಲ್ಲಿ ಸಕಾರಾತ್ಮಕ ಮನಸ್ಥಿತಿ ಹೊಂದಿದ್ದೇನೆ ಎಂದು ರೈನಾ ಮಾಹಿತಿ ನೀಡಿದರು.
ನಾನು ಮನೆಯಲ್ಲಿ ಕುಳಿತು ಅಭಿಮಾನಿಯಾಗಿ ಏಷ್ಯಾಕಪ್ ಪಂದ್ಯಾವಳಿಯನ್ನು ವೀಕ್ಷಿಸಿದೆ. ತಂಡದಲ್ಲಿ ನಾನು ನಿರ್ವಹಿಸಬೇಕಾದ ಜವಾಬ್ದಾರಿಯ ಅರಿವಾಗಿದೆ. ಆ ಜವಾಬ್ದಾರಿಯನ್ನು ನಿಭಾಯಿಸಲು ಎದುರು ನೋಡುತ್ತಿದ್ದೇನೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಹೆಚ್ಚಿನ ರನ್ ಗಳಿಸಿ ಉತ್ತಮ ಫಾರ್ಮ್‌ಗೆ ಮರಳಲು ಪ್ರಯತ್ನಿಸುತ್ತೇನೆ. ನಂತರ ಏಕದಿನ ತಂಡಕ್ಕೆ ಮರಳಿ ಮುಂದಿನ ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸವಿದೆ ಎಂದು ರೈನಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement