ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೈಕಲ್‌ಗಾಗಿ ಯುವ ಪ್ರತಿಭೆ ಪರದಾಟ

Srinivasa Murthy VN
Updated On : 10 Mar 2014, 12:30 pm

-ಚನ್ನಮಾದೇಗೌಡ ಚಿಕ್ಕಮರಳಿ
ಪಾಂಡವಪುರ:
2012 ರಲ್ಲಿ ಸೈಕಲ್ ಖರೀದಿಗೆ ಹಣವಿಲ್ಲದೇ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಿಂದಲೇ ದೂರ ಉಳಿದಿದ್ದ ಕ್ರೀಡಾಪಟು ಇತ್ತೀಚೆಗೆ ಕೋಲ್ಕತ್ತದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಗಿಟ್ಟಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಪಟ್ಟಣದ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿರುವ ಇ. ಕೃಷ್ಣ ತಾಲೂಕಿನ ಚಿಕ್ಕಾಡೆ ಗ್ರಾಮದ ಏಳುಮಲೈ ಮತ್ತು ಯಶೋಧಮ್ಮ ದಂಪತಿಯ ಪುತ್ರ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸೈಕಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಕೃಷ್ಣ ಗ್ರಾಮೀಣ ಪ್ರತಿಭೆಯ ಝಲಕ್ ತೋರಿಸಿ, ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಂತರ ಕೋಲ್ಕತ್ತಾದಲ್ಲಿ 2014 ರ ಮಾ.2 ರಂದು ನಡೆದ ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಗಳಿಸಿರುವುದು ಜಿಲ್ಲೆಗೂ ಸಂದ ಗೌರವವೇ ಆಗಿದೆ.
ಸಾಧನೆ ಮಾಡಿದ್ದು ಹೇಗೆ?: ಕಳೆದ 2012ರ ಜ.26 ರಂದು ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ಡಿ. 6ರಂದು ಧಾರವಾಡದಲ್ಲಿ ನಡೆದ ಭಗತ್ ಸಿಗ್ ಕಪ್‌ನಲ್ಲಿ ಭಾಗವಹಿಸಿ ಅಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು. ತಾಲೂಕು ಮಟ್ಟದಲ್ಲಿ ನಾಲ್ಕು ಬಾರಿ, ಜಿಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಸತತ ಮೂರು ಬಾರಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಥಮ ಬಾರಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಸೈಕಲ್‌ಗೂ ಕಾಸಿರಲಿಲ್ಲ: ಕಳೆದ 2012 ಜನವರಿಯಲ್ಲಿ ಕೋಲ್ಕತ್ತದಲ್ಲೇ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸೈಕಲ್ ಖರೀದಿಗೆ ಹಣವಿಲ್ಲದ ಕಾರಣ ಆ ಸ್ಪರ್ಧೆಯಿಂದ ದೂರ ಉಳಿದನು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಸುಮಾರು 3 ಲಕ್ಷ ಬೆಲೆ ಬಾಳುವ ಸೈಕಲ್ ಅವಶ್ಯಕತೆ ಇದೆ.
ಆದರೆ ಬಡ ರೈತಾಪಿ ಕುಟಂಬದಿಂದ ಬಂದಿರುವ ಕೃಷ್ಣ ಸೈಕಲ್ ಖರೀದಿಸುವ ಸಾಮರ್ಥ್ಯವಿಲ್ಲದೇ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಮತ್ತು ಕೋಲ್ಕತ್ತದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದರೂ ಹಣಕಾಸಿನ ಕೊರತೆಯಿಂದ ಸ್ಪರ್ಧೆಯಿಂದ ದೂರ ಉಳಿದ್ದನು.
ಈತ ಸಂಸದೆ ರಮ್ಯಾ ಅವರ ಬಳಿ ಸಹಾಯ ಹಸ್ತ ಕೈಚಾಚಿದ್ದು, ರಮ್ಯಾ ಈತನಿಗೆ ಬೇಕಾದ ಸೈಕಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಅದು ಕಾರ್ಯಗತವಾಗಿಲ್ಲ.
ಕೃಷ್ಣ ಕೇವಲ ಸೈಕ್ಲಿಂಗ್ ಸ್ಪರ್ಧೆ ಜೊತೆಗೆ 2011ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ರಾಜ್ಯಮಟ್ಟದ ಖೋ-ಖೋ ಕ್ರೀಡಾಪಟುವಾಗಿಯು ಗುರುತಿಸಿಕೊಂಡಿದ್ದಾನೆ. ಇಂತಹ ಬಡ ಗ್ರಾಮೀಣ ಪ್ರತಿಭೆಯಗಳು ಸಮಗ್ರವಾಗಿ ಕ್ರೀಡಾಭಿಮಾನ ಬೆಳವಣಿಗೆಗೆ ಸಹಾಯ ಮಾಡಲು ಇಚ್ಚಿಸುವವರು ಮೊ-7259725403 ಸಂಪರ್ಕಿಸಬಹುದು.
ಹೊಸ ಪ್ರತಿಭೆಗಳಿಗೆ ರಾಜ್ಯ ಕ್ರೀಡಾ ಇಲಾಖೆ ಪ್ರೋತ್ಸಾಹ ನೀಡುವುದಿಲ್ಲ. ಪ್ರತಿಭೆಗಳು ಸಾಧನೆ ಮಾಡಿದ ನಂತರ ಕರೆದು ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಇದೇ ರೀತಿಯಲ್ಲಿ ನಂಗೆ ಸೈಕಲ್ ಇಲ್ಲದೆ ಪರದಾಡಿ ಹೋರಾಟ ಮಾಡಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ತಂದುಕೊಟ್ಟ ನಂತರ ಈಗ ಇಲಾಖೆ ಅಧಿಕಾರಿಗಳು ನನ್ನನ್ನು ಹುಡುಕಾಡಲು ಆರಂಭಿಸಿದ್ದಾರೆ. ಸರ್ಕಾರ ಕ್ರೀಡೆ ಕೂಟಗಳಲ್ಲಿ ಭಾಗವಹಿಸುವ ಪ್ರತಿಭಾವಂತ ಕ್ರೀಡಾ ಪಟುಗಳಿಗೆ ಮೊದಲೇ ಮೂಲ ಸೌಲಭ್ಯಗಳನ್ನು ನೀಡದರೆ ಕಂಡವರನ್ನು ಗೋಗರೆಯುವುದು ತಪ್ಪುತ್ತದೆ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement