ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆರ್‌ಆರ್‌ಗೆ ವ್ಯಾಟ್ಸನ್ ನಾಯಕ, ರಾಹುಲ್ ಮಾರ್ಗದರ್ಶಕ

Srinivasa Murthy VN
Updated On : 10 Mar 2014, 11:01 am

ನವದೆಹಲಿ: ಐಪಿಎಲ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ ರಾಯಲ್ಸ್ 7ನೇ ಆವೃತ್ತಿಗೆ ತನ್ನ ನಾಯಕನನ್ನು ಪ್ರಕಟಿಸಿದ್ದು, ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್‌ಗೆ ಜವಾಬ್ದಾರಿ ನೀಡಿದೆ. ಇನ್ನು ಕಳೆದ ಮೂರು ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸೋಮವಾರ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿರುವ ರಾಜಸ್ಥಾನ ರಾಯಲ್ಸ್ ತಂಡ, 2008ರಲ್ಲಿ ತಂಡವನ್ನು ಸೇರಿಕೊಂಡ ಶೇನ್ ವ್ಯಾಟ್ಸನ್ ಅವರಿಗೆ ನಾಯಕತ್ವವನ್ನು ನೀಡಿದೆ. ಇನ್ನು ಕಳೆದ ಬಾರಿಯ ಆವೃತ್ತಿಯಲ್ಲಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ನಿವೃತ್ತಿ ಪಡೆದರು. ಹಾಗಾಗಿ ದ್ರಾವಿಡ್ ಅವರನ್ನು ತಂಡದ ಮಾರ್ಗದರ್ಶಕನಾಗಿ ಆಯ್ಕೆ ಮಾಡಲಾಗಿದೆ ಎಂದು ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ವ್ಯಾಟ್ಸನ್ ರಾಜಸ್ಥಾನ ತಂಡದಲ್ಲೇ ಆಡುತ್ತಿದ್ದಾರೆ. ಅಲ್ಲದೆ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ತಂಡದ ಯಸಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ರೌಂಡರ್ ವ್ಯಾಟ್ಸನ್ ಆ ಆವೃತ್ತಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಕಳೆದ ಬಾರಿಯೂ ಆಲ್ರೌಂಡರ್ ಪ್ರದರ್ಶನ ನೀಡಿದ ಶೇನ್ ವ್ಯಾಟ್ಸನ್ ರಾಜಸ್ಥಾನ ತಂಡವನ್ನು ಸೆಮಿಫೈನಲ್‌ವರೆಗೂ ಕೊಂಡೊಯ್ದಿದ್ದರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಈ ವೇಳೆ ಮಾತನಾಡಿದ ಮಾಜಿ ನಾಯಕ ರಾಹುಲ್ ದ್ರಾವಿಡ್, ರಾಜಸ್ಥಾನ ತಂಡದ ನಾಯಕರಾಗಿ ಆಯ್ಕೆಯಾಗಿರುವ ಶೇನ್ ವ್ಯಾಟ್ಸನ್‌ಗೆ ಅಭಿನಂದನೆಗಳು. ವ್ಯಾಟ್ಸನ್ ಕೇವಲ ಒಬ್ಬ ವಿಶ್ವದ ಅತ್ಯುತ್ತಮ ಆಲ್ರೌಂಡರ್ ಅಷ್ಟೇ ಅಲ್ಲ. ಆತನಲ್ಲಿ ಉತ್ತಮ ನಾಯಕತ್ವದ ಗುಣಗಳಿವೆ. ವ್ಯಾಟ್ಸನ್ ಮೊದಲ ಆವೃತ್ತಿಯಿಂದಲೂ ತಂಡದಲ್ಲಿದ್ದಾನೆ. ಹಾಗಾಗಿ ಆತ ಆಟಗಾರರು ಹಾಗೂ ಸಿಬಂದಿ ಜತೆ ಹೆಚ್ಚು ಬಾಂಧವ್ಯ ಹೊಂದಿದ್ದಾನೆ. ಈ ಬಾರಿ ರಾಜಸ್ಥಾನ ತಂಡದಲ್ಲಿ ಉತ್ತಮ ಆಟಗಾರರು ಗುಂಪಾಗಿದೆ.  ಈ ಆಟಗಾರರು ವ್ಯಾಟ್ಸನ್ ನಾಯಕತ್ವದಲ್ಲಿ ಸಾಕಷ್ಟು ಬೆಳವಣಿಗೆ ಕಾಣಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ವ್ಯಾಟ್ಸನ್, ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವುದು ಗೌರವದ ಸಂಗತಿಯಾಗಿದೆ. ರಾಜಸ್ಥಾನ ಪಡೆ ನನಗೆ ಸಾಕಷ್ಟು ಸಮಯದಲ್ಲಿ ಉತ್ತಮ ಅವಕಾಶವನ್ನು ನೀಡಿದ್ದು, ಅತ್ಯುತ್ತಮ ತಂಡವಾಗಿದೆ. ರಾಹುಲ್ ದ್ರಾವಿಡ್ ನಾಯಕರಾಗಿದ್ದಾಗ ನನ್ನ ಮೇಲೆ ಸಾಕಷ್ಟು ವಿಶ್ವಾಸ ಹೊಂದಿದ್ದರು. ಅವರು ನೀಡಿದ ಅವಕಾಶಗಳು ನನ್ನ ಕ್ರಿಕೆಟ್ ಬೆಳವಣಿಗೆಗೆ ಕಾರಣವಾಯಿತು. ಫ್ರಾಂಚೈಸಿ ನನ್ನ ಮೇಲಿನ ವಿಶ್ವಾಸವನ್ನು ಉಳಿಸಿಕೊಂಡು ತಂಡದ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಮೂಲಕ ಗೆಲವಿನ ಹಾದಿಯನ್ನು ಮುಂದುವರಿಸಿಕೊಂಡು ಹೋಗುವುದು ನನ್ನ ಗುರಿಯಾಗಿದೆ. ಕಳೆದ ಆವೃತ್ತಿ ಹಾಗೂ 2008ರಲ್ಲಿನ ಉತ್ತಮ ಫಲಿತಾಂಶವನ್ನು ಪುನಾರಾವರ್ತಿಸಲು ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement