ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್: ಚಿನ್ನ ಗೆದ್ದ ಹೀನಾ
ನವದೆಹಲಿ: ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಶೂಟರ್ ಹೀನಾ ಸಿಧು 7ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಸೋಮವಾರ ಕುವೈತ್ನಲ್ಲಿ ನಡೆದ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಚಿನ್ನದ ಪದಕ ಪಡೆದಿದ್ದಾರೆ. ಆರಂಭದಿಂದಲೇ ಅತ್ಯತ್ತಮ ಪ್ರದರ್ಶನ ನೀಡಿದ ಹೀನಾ, ಪ್ರಥಮ ಹಂತದ ಮೊದಲ ಸುತ್ತಿನಲ್ಲಿ 31.4 ಅಂಕ ಪಡೆದುಕೊಂಡರು. ನಂತರ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡ ಹೀನಾ ಮೊದಲ ಹಂತದಲ್ಲಿ 61.3 ಅಂಕಗಳನ್ನು ಪಡೆಯುವ ಮೂಲಕ ಪ್ರಮುಖ ಸುತ್ತಿಗೆ ಪ್ರವೇಶಿಸಿದರು.
ಎರಡನೇ ಹಂತದಲ್ಲಿ ಹೀನಾ ಚೀನಾದ ಚೈ ಯಿಂಗ್ ವು ಹಾಗೂ ಯಾಮೈ ಹೌಂಗ್ ಅವರಿಂದ ತೀವ್ರ ಪೈಪೋಟಿ ಎದುರಿಸಬೇಕಾಯಿತು. ಆದರೂ ಹೀನಾ ಈ ಇಬ್ಬರುಗಿಂತ 0.7 ಅಂಕಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು.
ಅಂತಿಮ ಸುತ್ತಿನಲ್ಲೂ ಚೀನಾದ ವು ಅವರಿಂದ ಪೈಪೋಟಿ ಎದುರಿಸಿದರು. ಅಂತಿಮವಾಗಿ ಹೀನಾ 181.1 ಅಂಕವನ್ನು ಪಡೆದು ಅಗ್ರ ಸ್ಥಾನ ಪಡೆದರು. ಇನ್ನು ವು ಅವರು 180.7 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಪೂಜಾ ಘಟ್ಕರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದರು.