ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರಿಕ್ವಾರ್ಟರ್‌ಫೈನಲ್‌ಗೆ ಪೇಸ್-ಸ್ಟೆಪಾನೆಕ್

Srinivasa Murthy VN
Updated On : 10 Mar 2014, 11:01 am

ಇಂಡಿಯಾನ ವೆಲ್ಸ್ (ಅಮೆರಿಕ): ಭಾರತದ ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಅಮೆರಿಕದಲ್ಲಿ ನಡೆಯುತ್ತಿರುವ ಎಟಿಪಿ ಇಂಡಿಯಾನ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ನಾಲ್ಕನೇ ಶ್ರೇಯಾಂಕದ ಗೌರವ ಪಡೆದಿರುವ ಪೇಸ್ ಮತ್ತು ಸ್ಪೆಪಾನೆಕ್ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಜೆರ್ಜಿ ಜಾನೊವಿಜ್ ಮತ್ತು ಜರ್ಮನಿಯ ಫಿಲಿಪ್ ಕೊಹ್ಲ್‌ಶ್ರೇಬರ್ ಜೋಡಿಯ ವಿರುದ್ಧ 7-6 (7-6), 3-6, 10-5 ಸೆಟ್‌ಗಳಿಂದ ಪರಾಭವಗೊಳಿಸಿದರು. ಒಟ್ಟು 5,240,015 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಈ ಹಾರ್ಡ್ ಕೋರ್ಟ್ ಟೂರ್ನಿಯಲ್ಲಿ ಭಾರತ-ಜೆಕ್ ಜೋಡಿ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ಒಂದು ಗಂಟೆ 38 ನಿಮಿಷಗಳ ಹೋರಾಟದಲ್ಲಿ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹದಿನಾರರಫಟ್ಟ ಪ್ರವೇಶಿಸಿದರು.
ಮುಂದಿನ ಸುತ್ತಿನ ಸೆಣಸಿನಲ್ಲಿ ಭಾರತ-ಜೆಕ್ ಜೋಡಿಗೆ ಇಸ್ರೇಲ್‌ನ ಜೊನಾಥನ್ ಎರ್ಲಿಚ್ ಮತ್ತು ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ಸವಾಲು ಎದುರಾಗಲಿದೆ. ಪೇಸ್-ಸ್ಪೆಪಾನೆಕ್ ಜೋಡಿಗೆ ಜೆರ್ಜಿ ಮತ್ತು ಫಿಲಿಪ್ ಅವರಿಂದ ಕಠಿಣ ಸವಾಲು ಎದುರಾಯಿತು. ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಕಷ್ಟಪಟ್ಟು ಗೆದ್ದುಕೊಂಡಿದ್ದರೆ, ಎರಡನೇ ಸೆಟ್‌ನಲ್ಲಿ ಸೋತು ಹಿನ್ನಡೆ ಅನುಭವಿಸಿದ್ದರು. ಆದರೆ, ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಮತ್ತೆ ಮೈಕೊಡವಿ ಮೇಲೆದ್ದ ಭಾರತ-ಜೆಕ್ ಜೋಡಿ ಪರಿಣಾಮಕಾರಿ ಸರ್ವ್‌ಗಳನ್ನು ಪ್ರದರ್ಶಿಸುವುದರ ಜೊತೆಗೆ ಎದುರಾಳಿಯ ಗೇಮ್‌ಗಳನ್ನು ಬ್ರೇಕ್ ಮಾಡುವ ಮೂಲಕ ಮುಂದಿನ ಸುತ್ತು ಪ್ರವೇಶಿಸುವ ಭಾಗ್ಯ ತಮ್ಮದಾಗಿಸಿಕೊಂಡರು.
ಪ್ರಸ್ತುತ ಈ ಪಂದ್ಯಾವಳಿಯ ಸ್ಪರ್ಧಾಕಣದಲ್ಲಿ ಉಳಿದುಕೊಂಡಿರುವ ಪೇಸ್ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಈಗಾಗಲೇ ಡಬಲ್ಸ್‌ನಲ್ಲಿ ಪಾಕಿಸ್ತಾನದ ಐಸಾಮುಲ್-ಹಕ್-ಖುರೇಷಿ ಜೊತೆ ಆಡಿದ್ದ ರೋಹನ್ ಬೋಪಣ್ಣ ಸೋತು ಹೊರನಡೆದಿದ್ದರೆ, ಸಿಂಗಲ್ಸ್‌ನಲ್ಲಿ ಅರ್ಹತಾ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿಯೇ ಪರಾಜಯ ಕಂಡಿದ್ದ ಸೋಮ್‌ದೇವ್ ಪ್ರಧಾನಘಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement