ಮರ್ಲಾನ್ ಮಿಂಚು; ವಿಂಡೀಸ್ ಕೇಕೆ
ಬಾರ್ಬ್‌ಡಾಸ್: ಅನುಭವಿ ಮರ್ಲಾನ್ ಸ್ಯಾಮುಯೆಲ್ಸ್‌ರ ಆಲ್‌ರೌಂಡ್ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 27 ರನ್‌ಗಳಿಂದ ಜಯಭೇರಿ ಬಾರಿಸಿದೆ. ಈ ಗೆಲವಿನೊಂದಿಗೆ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ.
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 170 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಸಂಪಾದಿಸಿತು.
ಈ ಕಠಿಣ ಗುರಿಯೆಡೆಗೆ ಸಾಗಲೆತ್ನಿಸಿದ ಇಂಗ್ಲೆಂಡ್ ಪಡೆಗೆ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಎಂಟನೇ ಕ್ರಮಾಂಕದಲ್ಲಿ ಆಡಲಿಳಿದ ಟಿಮ್ ಬ್ರೆಸ್ನನ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 47 ರನ್‌ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತದ ಸಾಧನೆಯಾಯಿತು. ಇನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ರವಿ ಬೊಪಾರ 24 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಹೊಂದಿದ್ದ 42 ರನ್‌ಗಳಿಸಿದ್ದು ಎರಡನೇ ಉತ್ತಮ ಸಾಧನೆಯಾಯಿತು. ಮುಖ್ಯವಾಗಿ ಅಗ್ರ ಐವರು ಬ್ಯಾಟ್ಸ್‌ಮನ್‌ಗಳ ದಯನೀಯ ವೈಫಲ್ಯದಿಂದಾಗಿ ಇಂಗ್ಲೆಂಡ್ ತಂಡ ಹೋರಾಟದ ಮುನ್ನವೇ ಸೋಲೊಪ್ಪಿಕೊಂಡಂತಾಗಿತ್ತು.
ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದ ಇಂಗ್ಲೆಂಡ್ ಕೇವಲ 73 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ನೂರರ ಗಡಿ ಸಹ ತಲುಪುವುದು ಕಷ್ಟವಾಗಿತ್ತು. ಆದರೆ, ಕೆಳಕ್ರಮಾಂಕದಲ್ಲಿ ಬೊಪಾರ ಮತ್ತು ಬ್ರೆಸ್ನನ್ ಹೋರಾಟ ನಡೆಸಿದರೂ ಸಹ ಆರಂಭದಲ್ಲೇ ಬಿದ್ದ ಏಟುಗಳಿಂದಾಗಿ ಪ್ರವಾಸಿ ತಂಡಕ್ಕೆ ಗೆಲವಿನ ಸಮೀಪವು ಬರಲಾಗಲಿಲ್ಲ. ವಿಂಡೀಸ್ ಪರ ಶಿಸ್ತಿನ ದಾಳಿ ನಡೆಸಿದ ಸ್ಯಾಮುಯೆಲ್ ಬದ್ರಿ 3, ಮರ್ಲಾನ್ ಸ್ಯಾಮುಯೆಲ್ಸ್ 2 ಹಾಗೂ ಡ್ವೈನ್ ಬ್ರಾವೊ ಮತ್ತು ಸುನೀಲ್ ನಾರಾಯಣ್ ತಲಾ 1 ವಿಕೆಟ್ ಉರುಳಿಸಿದರು.
ಸ್ಯಾಮುಯೆಲ್ಸ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಮೊತ್ತ ಗಳಿಸಲು ಮರ್ಲಾನ್ ಸ್ಯಾಮುಯೆಲ್ಸ್ ಮತ್ತು ಕ್ರಿಸ್ ಗೇಯ್ಲ್ ಕಾರಣರಾದರು. ಅರ್ಧಶತಕ ಬಾರಿಸಿದ ಸ್ಯಾಮುಯೆಲ್ಸ್ ಕೇವಲ 46 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 69 ರನ್‌ಗಳಿಸಿ ಅಜೇಯರಾಗುಳಿದರು. ಗೇಯ್ಲ್ ಸಹ ಎದುರಾಳಿ ಬೌಲರ್‌ಗಳಿಗೆ ತೀಕ್ಷ್ಣ ಉತ್ತರ ನೀಡಿ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 43 ರನ್‌ಗಳಿಸಿದರು. ವಿಂಡೀಸ್‌ಗೆ ಉತ್ತಮ ಆರಂಭ ದೊರೆಯಿತು. ಇನಿಂಗ್ಸ್ ಆರಂಭಿಸಿದ ಡ್ವೈನ್ ಸ್ಮಿತ್ (27ರನ್, 18 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಗೇಯ್ಲ್ ಮೊದಲ ವಿಕೆಟ್‌ಗೆ ಕೇವಲ 38 ಎಸೆತಗಳಲ್ಲಿ 57 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಇನ್ನು ಆ್ಯಂಡ್ರೆ ರಸೆಲ್ ಸಹ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 24 ರನ್‌ಗಳ ಉತ್ತಮ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರವಿ ಬೊಪಾರ 2 ಮತ್ತು ಜೇಮ್ಸ್ ಟ್ರೆಡ್‌ವೆಲ್ 1 ವಿಕೆಟ್ ಕಬಳಿಸಿದರು. ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ ಮರ್ಲಾನ್ ಸ್ಯಾಮುಯೆಲ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.