ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಶ್ಯಪ್-ಸಿಂಧು ಶುಭಾರಂಭ

Srinivasa Murthy VN
Updated On : 12 Mar 2014, 11:47 am

ಬಾಸೆಲ್: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪರುಪಳ್ಳಿ ಕಶ್ಯಪ್ ಮತ್ತು ಆನಂದ್ ಪವಾರ್ ಹಾಗೂ ಪಿ.ವಿ. ಸಿಂಧು 1,25,000 ಡಾಲರ್ ಬಹುಮಾನ ಮೊತ್ತದ ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.  
ಆದರೆ ಭಾರತದ ಮತ್ತೊಬ್ಬ ಭರವಸೆಯ ಯುವ ಆಟಗಾರ ಕಿಡಂಬಿ ಶ್ರೀಕಾಂತ್ ಮಾತ್ರ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿ ಭಾರಿ ಆಘಾತಕ್ಕೆ ಒಳಗಾಗಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಪಿ. ಕಶ್ಯಪ್ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಹಾಲೆಂಡ್‌ನ ಎರಿಕ್ ಮೇಜಸ್ ವಿರುದ್ಧ 21-17, 21-15 ಅಂಕಗಳ ಅಂತರದಲ್ಲಿ ಜಯಗಳಿಸಿದರು. ಮೂರನೇ ಶ್ರೇಯಾಂಕಿತ ಭಾರತೀಯ ಆಟಗಾರ ಕೇವಲ 34 ನಿಮಿಷಗಳ ಅಂತರದಲ್ಲಿಯೇ ಗೆಲುವು ದಾಖಲಿಸಿ ಮುಂದಿನ ಸುತ್ತು ಪ್ರವೇಶಿಸಿದರು. ಎರಡನೇ ಸುತ್ತಿನಲ್ಲಿ ಕಶ್ಯುಪ್‌ಗೆ ಜರ್ಮನಿಯ ಲೂಕಾಸ್ ಶಮಿಡಟ್ ಅವರನ್ನು ಎದುರಿಸಲಿದ್ದಾರೆ.
ವಿಶ್ವದ 18ನೇ ಶ್ರೇಯಾಂಕಿತ ಕಶ್ಯಪ್ ಪಂದ್ಯದುದ್ದಕ್ಕೂ ತಮ್ಮ ಅನುಭವವನ್ನು ಸಮರ್ಪಕವಾಗಿ ಬಳಸಿಕೊಂಡರು.  ಮತ್ತೊಂದು ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಆನಂದ್ ಪವಾರ್ 21-17, 21-10 ನೇರ ಅಂಕಗಳಿಂದ ಮಲೇಷಿಯಾದ ಕೊಕ್ ಪಾಂಗ್ ಲೋಕ್‌ರನ್ನು ಸೋಲಿಸಿ ಶುಭಾರಂಭ ಮಾಡಿದರು. ಎರಡೂ ಗೇಮ್‌ಗಳಲ್ಲಿ ಉತ್ತಮ ಆಟ ಸಂಘಟಿಸಿದ ಪವಾರ್ 26 ನಿಮಿಷಗಳಲ್ಲಿಯೇ ಎದುರಾಳಿಯನ್ನು ಸದೆಬಡಿದರು. 2ನೇ ಸುತ್ತಿನಲ್ಲಿ ಆನಂದ್ ಅವರು ಜರ್ಮನಿಯ ಟಾಬಿಯಸ್ ವಾಡೆಂಕಾ ಅವರ ಸವಾಲು ಎದುರಿಸಲಿದ್ದಾರೆ.
ಶ್ರೀಕಾಂತ್‌ಗೆ ನಿರಾಸೆ: ನಿರಾಶಾದಾಯಕ ಫಲಿತಾಂಶ ಎಂದರೆ ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿಯೇ ಸೋಲಿನ ಕಹಿ ಉಂಡಿದ್ದು. ಕಳೆದ ವರ್ಷ ಥಾಯ್ಲೆಂಡ್ ಗ್ರ್ಯಾನ್ ಪ್ರಿ ಗೋಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿದ್ದ ಕೆ. ಶ್ರೀಕಾಂತ್, ಸ್ಥಳೀಯ ಆಟಗಾರ ಹೆನ್ರಿ ಹರ್‌ಸ್ಕೇನೆನ್ ಅವರ ಎದುರು ತಲೆಬಾಗಿಸಿದರು.
ಸ್ವಿಸ್ ಆಟಗಾರ ಹೆನ್ರಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ 19-21, 21-18, 21-17ರಿಂದ ಶ್ರೀಕಾಂತ್‌ಗೆ ಆಘಾತ ನೀಡಿ ಮುಂದಡಿ ಇಟ್ಟರು.
ಸಿಂಧು ಎರಡನೇ ಸುತ್ತಿಗೆ ಈ ಮಧ್ಯೆ ಮಹಿಳೆಯರ ವಿಭಾಗದಲ್ಲಿ ಪಿ.ವಿ. ಸಿಂಧು ಕೂಡ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ.
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ 21-18, 21-15ರಿಂದ ಮಲೇಷಿಯಾದ ಸನ್ನಾತಾಶಾ ಸನಿರು ಅವರನ್ನು ಮಣಿಸಿದರು. ಸಿಂಧು 32 ನಿಮಿಷಗಳಲ್ಲಿಯೇ ಅಂತಿಮ ಗೆಲವು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement