ಚೇತರಿಸಿಕೊಳ್ಳುವ ಲಕ್ಷಣ ತೋರಿದ ಶುಮಾಕರ್
ಫಾರ್ಮುಲಾ ಒನ್ ತಾರೆ ಮೈಕಲ್ ಶುಮಾಕರ್ ಆದಷ್ಟು ಬೇಗ ಚೇತರಿಸಿ ಕೊಳ್ಳುವ ಬಗ್ಗೆ ಶುಮಿ ಕುಟುಂಬ ವಿಶ್ವಾಸ..
ನವದೆಹಲಿ: ಸ್ಕೀಯಿಂಗ್ ಅಪಘಾತಕ್ಕೀಡಾಗಿ ಕೋಮಾದಲ್ಲಿರು ಫಾರ್ಮುಲಾ ಒನ್ ತಾರೆ ಮೈಕಲ್ ಶುಮಾಕರ್ ಆದಷ್ಟು ಬೇಗ ಚೇತರಿಸಿಕೊಳ್ಳುವ ಬಗ್ಗೆ ಶುಮಿ ಕುಟುಂಬ ವಿಶ್ವಾಸ ಹೊಂದಿದೆ. ಶುಮಾಕರ್ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆಯ ಲಕ್ಷಣಗಳು ಗೋಚರಿಸಿವೆ ಎಂದು ಶುಮಿ ವಕ್ತಾರೆ ತಿಳಿಸಿದ್ದಾರೆ.
ಕಳೆದ ವರ್ಷ ಡಿ.29ರಂದು ಸ್ಕೀಯಿಂಗ್ ಅಪಘಾತದಿಂದಾಗಿ ಶುಮಾಕರ್ ಕೋಮಾ ಸ್ಥಿತಿಗೆ ಜಾರಿದ್ದರಲ್ಲದೇ, ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದವು. ಶುಮಾಕರ್ ಆದಷ್ಟು ಬೇಗ ಚೇತರಿಸಿಕೊಳ್ಳುವ ಬಗ್ಗೆ ನಾವು ವಿಶ್ವಾಸ ಹೊಂದಿದ್ದೇವೆ. ಶುಮಿ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ನಾವು ತಾಳ್ಮೆ ವಹಿಸಬೇಕಾದುದು ಅಗತ್ಯ ಎಂದು ಶುಮಿ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.
ಮೈಕಲ್‌ಗೆ ಅಷ್ಟು ತೀವ್ರವಾದ ಪೆಟ್ಟಗಿದ್ದರೂ ಅವರು ಈ ಹಿಂದಿನ ಪರಿಸ್ಥಿತಿಗಿಂತ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದಾರೆ. ಇದು ನಮಗೆ ಸಂತಸ ತಂದಿದೆ ಎಂದು ತಿಳಿಸಲಾಗಿದೆ.
ಇನ್ನು ಇತ್ತೀಚೆಗೆ ಶುಮಿಯನ್ನು ನೋಡಲು ತೆರಳಿದ್ದ ಫಾರ್ಮುಲಾ ಒನ್ ಚಾಲಕ ಫೆಲಿಪೆ ಮಸ್ಸಾ, ಶುಮಾಕರ್ ತಮ್ಮ ಮಾತಿಗೆ ಸ್ಪದಿಸಿದ್ದರು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆತ ಮಲಗಿದ್ದಾನೆ. ನೋಡಲು ಎಲ್ಲಾ ಸಹಜವಾದಂತೆ ಕಾಣುತ್ತದೆ. ನಾನು ಆತನನ್ನು ನೋಡಲು ಹೋದಾಗ ಸ್ಪಂದನೆ ನೀಡಿದ್ದರು ಎಂದು ಮಸ್ಸಾ ತಿಳಿಸಿದ್ದಾರೆ.