ಸಿಡಿದ ಸ್ಯಾಮಿ, ವಿಂಡೀಸ್ಗೆ ಸರಣಿ
ಬ್ರಿಜ್ಟೌನ್: ನಾಯಕ ಡಾರೆನ್ ಸ್ಯಾಮಿ ಸ್ಫೋಟಕ ಬ್ಯಾಟಿಂಗ್ ಮತ್ತು ಕ್ರಿಶ್ಮಾರ್ ಸ್ಯಾಂಟೋಕಿಯ ಕರಾರುವಾಕ್ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧ ರೋಚಕ ಗೆಲವು ದಾಖಲಿಸಿದೆ. ಈ ಗೆಲವಿನೊಂದಿಗೆ ವೆಸ್ಟ್ ಇಂಡೀಸ್ ಪಡೆ ಇನ್ನೂ ಒಂದು ಪಂದ್ಯ ಇರುವಂತೆಯೇ 3 ಪಂದ್ಯಗಳ ಟಿ-20 ಸರಣಿಯನ್ನು 2-0 ಮುನ್ನಡೆಯೊಂದಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 5 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಜೋಸ್ ಬಟ್ಲರ್ (67ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್) ಆಕರ್ಷಕ ಅರ್ಧಶತಕ ಬಾರಿಸಿದರೆ, ಆರಂಭಿಕ ಅಲೆಕ್ಸ್ ಹಾಲ್ಸ್ ಉಪಯುಕ್ತ 40ರನ್ಗಳ ಕಾಣಿಕೆ ನೀಡಿದರು.
ವಿಂಡೀಸ್ ಪರ ಚುರುಕಿನ ದಾಳಿ ನಡೆಸಿದ ಕ್ರಿಶ್ಮಾರ್ ಸ್ಯಾಂಟೋಕಿ 4 ಮತ್ತು ಡ್ನೈನ್ ಬ್ರಾವೊ 2 ವಿಕೆಟ್ ಕಬಳಿಸಿದರು. ಉತ್ತರವಾಗಿ 153 ರನ್ಗಳ ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ ಇನ್ನೂ 7 ಎಸೆತಗಳು ಉಳಿದಿರುವಂತೆಯೇ 5 ವಿಕೆಟ್ ಕಳೆದುಕೊಂಡು 155 ರನ್ಗಳಿಸಿ ಸಂಭ್ರಮಿಸಿತು.
ಒಂದು ಹಂತದಲ್ಲಿ ವಿಂಡೀಸ್ 15 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ಗಳಿಸಿದಾಗ ಒತ್ತಡದಲ್ಲಿತ್ತು. ಈ ಹಂತದಲ್ಲಿ ಆರನೇ ಕ್ರಮಾಂಕದಲ್ಲಿ ಆಡಲಿಳಿದ ಡಾರೆನ್ ಸ್ಯಾಮಿ ಕೇವಲ 9 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಒಳಗೊಂಡ ಅಜೇಯ 30 ರನ್ ಗಳಿಸುವುದರೊಂದಿಗೆ ಪಂದ್ಯದ ದಿಕ್ಕು ಬದಲಿಸಿ ತಮ್ಮ ತಂಡದ ಅದ್ಧೂರಿ ಗೆಲವಿಗೆ ಕಾರಣರಾದರು.
ಉಳಿದಂತೆ, ಕ್ರಿಸ್ ಗೇಯ್ಲ್ (36ರನ್, 30 ಎಸೆತ, 1 ಬೌಂಡರಿ, 4 ಸಿಕ್ಸರ್) ಮತ್ತು ಡ್ವೈನ್ ಸ್ಮಿತ್ (30ರನ್, 16 ಎಸೆತ, 2 ಬೌಂಡರಿ, 3 ಸಿಕ್ಸರ್) ಕೂಡ ಉತ್ತಮ ಕಾಣಿಕೆ ನೀಡಿದರು. ಸ್ಯಾಂಟೋಕಿ ಪಂದ್ಯಶ್ರೇಷ್ಠ ಗೌರವ ಪಡೆದರು.
ಸ್ಕೋರ್ ವಿವರ
ಇಂಗ್ಲೆಂಡ್ 20 ಓವರುಗಳಲ್ಲಿ 7 ವಿಕೆಟ್ಗೆ 152 (ಜೋಸ್ ಬಟ್ಲರ್ 67, ಅಲೆಕ್ಸ್ ಹಾಲ್ಸ್ 40, ಕ್ರಿಶ್ಮಾರ್ ಸ್ಯಾಂಟೋಕಿ 21ಕ್ಕೆ4, ಡ್ನೈನ್ ಬ್ರಾವೊ 34ಕ್ಕೆ2). ವೆಸ್ಟ್ ಇಂಡೀಸ್ 18.5 ಓವರುಗಳಲ್ಲಿ 5 ವಿಕೆಟ್ಗೆ 155 (ಕ್ರಿಸ್ ಗೇಯ್ಲ್ 36, ಡಾರೆನ್ ಸ್ಯಾಮಿ ಅಜೇಯ 30, ಡ್ನೈನ್ ಸ್ಮಿತ್ 30, ಮರ್ಲಾನ್ ಸ್ಯಾಮುಯೆಲ್ಸ್ 28, ಲೆಂಡ್ಲ್ ಸಿಮನ್ಸ್ 19, ಟಿಮ್ ಬ್ರೆಸ್ನನ್ 51ಕ್ಕೆ2).