ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಗ್ಲೆಂಡ್ ಜಯದಲ್ಲಿ ಜೋರ್ಡಾನ್ ಪ್ರಮುಖ ಪಾತ್ರ

Srinivasa Murthy VN
Updated On : 15 Mar 2014, 12:41 pm

ಬಾರ್ಬ್‌ಡಾಸ್: ಪರಿಣಾಮಕಾರಿ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲವು ದಾಖಲಿಸಿದೆ. ಮೊದಲೆರಡೂ ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿದ್ದ ಪರಿಣಾಮ ಇಂಗ್ಲೆಂಡ್ ಪಾಲಿಗೆ ಈ ಗೆಲವು ಮಾನಸಿಕ ನೆಮ್ಮದಿಯನ್ನಷ್ಟೇ ನೀಡಿದೆ.
ಮತ್ತೊಂದೆಡೆ ಮೂರನೇ ಪಂದ್ಯಕ್ಕೆ ಮುನ್ನವೇ ಸರಣಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ವೆಸ್ಟ್ ಇಂಡೀಸ್ ಆಟಗಾರರು 2-1ಮುನ್ನಡೆ ಅಂತರದಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ಆರಂಭಿಕ ಮೈಕೆಲ್ ಲಂಬ್ ಕೇವಲ 40 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 63 ರನ್ ಸಿಡಿಸಿದರು. ಆದರೆ, ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ನಿಜವಾಗಿಯೂ ಗಮನ ಸೆಳೆದಿದ್ದು ಕೆಳಕ್ರಮಾಂಕದ ದಾಂಡಿಗ ಕ್ರಿಸ್ ಜೋರ್ಡಾನ್. ಒಂದು ಹಂತದಲ್ಲಿ ಇಂಗ್ಲೆಂಡ್ ಮೊತ್ತ ಒಂದೂವರೆ ಶತಕದ ಗಡಿ ತಲುಪುವುದು ಕೂಡ ಕಷ್ಟವಾಗಿತ್ತು. ಆದರೆ, ಬ್ರಾವೊ ಎಸೆದ ಇನಿಂಗ್ಸ್‌ನ ಕೊನೆಯ ಓವರಿನಲ್ಲಿ ಜೋರ್ಡಾನ್ 4 ಸಿಕ್ಸರ್ ಸೇರಿದಂತೆ ಒಟ್ಟು 26 ರನ್ ಚಚ್ಚುವುದರೊಂದಿಗೆ ಇಂಗ್ಲೆಂಡ್ ಅತ್ಯುತ್ತಮ ಸ್ಥಿತಿ ತಲುಪುವಂತಾಯಿತು.
ವೆಸ್ಟ್ ಇಂಡೀಸ್ ಪರ ಉತ್ತಮ ದಾಳಿ ನಡೆಸಿದ ಕ್ರಿಶ್ಮಾರ್ ಸ್ಯಾಂಟೋಕಿ ಮತ್ತು ಶೆಲ್ಡನ್ ಕಾಟ್ರೆಲ್ ತಲಾ 2 ವಿಕೆಟ್ ಉರುಳಿಸಿದರು. ಉತ್ತರವಾಗಿ ತಮ್ಮ ಸರದಿ ಆರಂಭಿಸಿದ ವೆಸ್ಟ್ ಇಂಡೀಸ್ ಆಟಗಾರರು ಉತ್ತಮ ಹೋರಾಟ ನಡೆಸಿದರೂ ಸಹ 7 ವಿಕೆಟ್ ನಷ್ಟಕ್ಕೆ 160 ರನ್‌ಗಳಿಸಲಷ್ಟೇ ಶಕ್ತರಾಗಿ ಅಂತಿಮವಾಗಿ ಸೋಲಿನ ಕಹಿ ಅನುಭವಿಸಿತು. ವಿಂಡೀಸ್ ಪರ ಲೆಂಡ್ಲ್ ಸಿಮನ್ಸ್ (69ರನ್, 55 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ದಿನೇಶ್ ರಾಮ್‌ದಿನ್ (33) ಹೋರಾಟ ಬಿಟ್ಟರೆ, ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತಂಡ ಗೆಲವಿನ ಹಾದಿಯಲ್ಲಿ ಮುಗ್ಗರಿಸುವಂತಾಯಿತು.
ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲೂ ಗಮನ ಸೆಳೆದ ಕ್ರಿಸ್ ಜೋರ್ಡಾನ್ 3 ಹಾಗೂ ರವಿ ಬೊಪಾರ 2 ವಿಕೆಟ್ ಕಬಳಿಸಿದರು. ಜೋರ್ಡಾನ್ ಪಂದ್ಯಶ್ರೇಷ್ಠ ಹಾಗೂ ಡಾರೆನ್ ಸಾಮಿ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 20 ಓವರುಗಳಲ್ಲಿ 6 ವಿಕೆಟ್‌ಗೆ 165

(ಮೈಕೆಲ್ ಲುಂಬ್ 63, ಅಲೆಕ್ಸ್ ಹಾಲ್ಸ್ 38, ಕ್ರಿಸ್ ಜೋರ್ಡಾನ್ ಅಜೇಯ 27, ಮೊರ್ಗನ್ 18, ಸ್ಯಾಂಟೋಕಿ 27ಕ್ಕೆ2, ಶೆಲ್ಡನ್ ಕಾಟ್ರೆಲ್ 37ಕ್ಕೆ2). ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 7 ವಿಕೆಟ್‌ಗೆ 160 (ಲೆಂಡ್ಲ್ ಸಿಮನ್ಸ್ 69, ದಿನೇಶ್ ರಾಮದಿನ್ 33, ಡ್ವೈನ್ ಬ್ರಾವೊ 16, ಕ್ರಿಸ್ ಜೋರ್ಡಾನ್ 39ಕ್ಕೆ3, ರವಿ ಬೊಪಾರ 28ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement