ಟಿ20 ವಿಶ್ವಕಪ್: ಢಾಕಾದಲ್ಲಿ ಎ.ಆರ್ ರೆಹಮಾನ್, ಎಕಾನ್ ಕಾರ್ಯಕ್ರಮ
ನವದೆಹಲಿ: ಭಾನುವಾರದಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಪ್ರಚಾರಕ್ಕಾಗಿ ನಡೆದ ಸಮಾರಂಭದಲ್ಲಿ ಭಾರತದ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಹಾಗೂ ಪಾಪ್ ಸಂಗೀತಗಾರ ಎಕಾನ್ ಕಾರ್ಯಕ್ರಮ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಐಸಿಸಿ ಪಂದ್ಯಾವಳಿಗೆ ಉತ್ತಮ ಪ್ರಚಾರ ನೀಡುವ ನಿಟ್ಟಿನಲ್ಲಿ ವರ್ಣರಂಜಿತ ಸಮಾರಂಭವನ್ನು ನಡೆಸಿತು. ಗುರುವಾರ ಢಾಕಾದಲ್ಲಿರುವ ಬಾಂಗಬಂಧು ನ್ಯಾಷನಲ್ ಸ್ಟೇಡಿಯಂ ನಡೆದ ಸಮಾರಂಭದಲ್ಲಿ ರೆಹಮಾನ್ ಹಾಗೂ ಎಕಾನ್ ಒಟ್ಟಿಗೆ ಕಾರ್ಯಕ್ರಮ ನೀಡಿದರು. ಈ ಮುನ್ನ ಮಂಗಳವಾರ ರೆಹಮಾನ್ ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಅವರೊಂದಿಗೆ ಸಂಗೀತದ ಬಗ್ಗೆ ಮಾತನಾಡಿದ್ದರು ಎಂದು ಬಾಂಗ್ಲಾದ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಈ ಇಬ್ಬರು ಖ್ಯಾತ ಸಂಗೀತಗಾರರು ಇದೇ ಮೊದಲ ಬಾರಿಗೆ ಬಾಂಗ್ಲಾದೇಶದಲ್ಲಿ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮವನ್ನು ಬಾಂಗ್ಲಾದೇಶ ಕ್ರಿಕೆಟ್ ಸಮಿತಿ ಆಯೋಜಿಸಿದ್ದು, ಇದಕ್ಕೆ 30 ಲಕ್ಷ ವೆಚ್ಚವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.