ಫೈನಲ್‌ಗೆ ಸಾನಿಯಾ ಜೋಡಿ
ಇಂಡಿಯಾನ ವೆಲ್ಸ್(ಕ್ಯಾಲಿಫೋರ್ನಿಯಾ): ಭಾರತದ ಟೆನಿಸ್ ತಾರೆ ಹಾಗೂ ಜಿಂಬಾಬ್ವೆಯ ಆಟಗಾರ್ತಿ ಕಾರಾ ಬ್ಲ್ಯಾಕ್ ಜೋಡಿಯು ಇಂಡಿಯಾನ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಈ ಮೂಲಕ ಸಾನಿಯಾ ಜೋಡಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ಗುರುವಾರ ರಾತ್ರಿ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿಯು 6-4, 3-6, 10-7 ಸೆಟ್‌ಗಳ ಅಂತರದಲ್ಲಿ ತಮ್ಮ ಎದುರಾಳಿ ಎಂಟನೇ ಶ್ರೇಯಾಂಕ ಪಡೆದ ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕ್ಕಾ ಮತ್ತು ಚೀನಾದ ಜೈ ಜೆಂಗ್ ಜೋಡಿಯನ್ನು ಮಣಿಸಿದೆ.
ಈ ಪಂದ್ಯದಲ್ಲಿ ಉಭಯ ಜೋಡಿಗಳು ಉತ್ತಮ ಪ್ರದರ್ಶನ ನೀಡಿದ ಪರಿಣಾಮ, ಈ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಆದರೆ ಅಂತಿಮವಾಗಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರ ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿ.
ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದ ಸಾನಿಯಾ ಜೋಡಿ 6-4 ಅಂತರದಲ್ಲಿ ಮುನ್ನಡೆ ಸಾಧಿಸಿತು. ಇನ್ನು ಎರಡನೇ ಸೆಟ್‌ನಲ್ಲಿ ಮಿರ್ಜಾ ಜೋಡಿ ಎದುರಾಳಿಯಿಂದ ಪ್ರಬಲ ಹೋರಾಟ ಎದುರಿಸಬೇಕಾಯಿತು. ಈ ಸೆಟ್‌ನಲ್ಲಿ ನಿಯಂತ್ರಣ ಸಾಧಿಸಿದ ಜೆಕ್ ಹಾಗೂ ಚೀನಾದ ಜೋಡಿ 6-3 ಅಂತರ ಕಾಯ್ದುಕೊಳ್ಳುವ ಮೂಲಕ ಸೆಟ್‌ಗಳ ಅಂತರವನ್ನು ಸಮಗೊಳಿಸಲಾಯಿತು. ಇನ್ನು ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಉಭಯ ಜೋಡಿಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ಮಿರ್ಜಾ ಜೋಡಿ ಅಂತಿಮವಾಗಿ ಗೆಲವಿನ ನಗೆ ಬೀರಿತು.
ಇನ್ನು ಅಗ್ರ ಶ್ರೇಯಾಂಕಿತ ಪಡೆದಿರುವ ಚೈನೀಸ್ ತೈಪೆನ ಸು ವೈ ಹಸೆ ಮತ್ತು ಚೀನಾದ ಸುಯ್ ಪೆಂಗ್ ಜೋಡಿ ಹಾಗೂ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಸ್ವೆಟ್ಲಾನಾ ಕುಜ್ನೆಟ್ಸೋವಾ ಮತ್ತು ಆಸ್ಟ್ರೇಲಿಯಾದ ಸಮಂತಾ ಸ್ಟೊಸುರ್ ಜೋಡಿ ನಡುವಣ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಜೋಡಿಯು ಫೈನಲ್ ಸುತ್ತಿನಲ್ಲಿ ಸಾನಿಯಾ ಜೋಡಿ ವಿರುದ್ಧ ಕಾದಾಟ ನಡೆಸಲಿದೆ.
ಸೆಮೀಸ್‌ಗೆ ಫೆಡರರ್: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್, ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ಫೆಡರರ್ ಉಪಾಂತ್ಯದ ಸುತ್ತಿಗೆ ಪ್ರವೇಶಿಸಿದ್ದಾರೆ.
ಫೆಡರರ್ ತಮ್ಮ ಪಂದ್ಯದಲ್ಲಿ ಎದುರಾಳಿ ಕೆವಿನ್ ಆ್ಯಂಡರ್‌ಸನ್ ವಿರುದ್ಧ 7-5, 6-1 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಪಂದ್ಯದ ಆರಂಭದಲ್ಲಿ ಕೆವಿನ್, ಫೆಡರರ್‌ಗೆ ಪ್ರಬಲ ಪೈಪೋಟಿ ನೀಡಿದರಾದರು ನಂತರ ತಮ್ಮ ನಿಯಂತ್ರಣ ಕಳೆದುಕೊಳ್ಳುತ್ತಾ ಸಾಗಿದರು. ಮೊದಲ ಸೆಟ್ ಹೆಚ್ಚು ಕುತೂಹಲದಿಂದ ಕೂಡಿದ್ದ ಪರಿಣಾಮ ಫೆಡರರ್ 7-5 ಅಂತರದಲ್ಲಿ ಮೇಲುಗೈ ಸಾಧಿಸಬೇಕಾಯಿತು. ನಂತರ ಎರಡನೇ ಸೆಟ್‌ನಲ್ಲಿ ಕೆವಿನ್‌ಗೆ ಹೆಚ್ಚು ಅವಕಾಶ ನೀಡದ ಫೆಡರರ್, 6-1 ಅಂತರದಲ್ಲಿ ಮುನ್ನಡೆ ಪಡೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಫೆಡರರ್ ತಮ್ಮ ಮುಂದಿನ ಪಂದ್ಯದಲ್ಲಿ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತೆ ಚೀನಾದ ಲೀ ನಾ ತಮ್ಮ ಎದುರಾಳಿ ಡೊಮಿನಿಕಾ ಕಿಬುಲ್ಕೋವಾ ಅವರನ್ನು 6-3, 4-6, 6-3 ಸೆಟ್‌ಗಳ ಅಂತರದಲ್ಲಿ ಗೆಲವು ಸಾಧಿಸಿದರು. ಈ ಮೂಲಕ ಲೀ ನಾ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.