ವಿಶ್ವಕಪ್‌ಗಾಗಿ ಬಾಂಗ್ಲಾಕ್ಕೆ ಭಾರತ ಪ್ರಯಾಣ
ಪ್ರತಿಷ್ಠಿತ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ..
ಮುಂಬೈ: ಪ್ರತಿಷ್ಠಿತ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಶುಕ್ರವಾರ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿತು.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ಗಳಲ್ಲಿನ ಸರಣಿ ಹಾಗೂ ನಂತರದ ಏಷ್ಯಾ ಕಪ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ ಪಾಲಿಗೆ ಈ ಸಲದ ವಿಶ್ವಕಪ್ ಟಿ-20 ಪಂದ್ಯಾವಳಿ ಅತ್ಯಂತ ಕಠಿಣ ಸ್ಪರ್ಧೆ ಎಂಬಂತಾಗಿದೆ.
ಅದರಲ್ಲೂ ಬಾಂಗ್ಲಾದೇಶದಲ್ಲಿಯೇ ನಡೆದಿದ್ದ ಏಷ್ಯಾಕಪ್‌ನಲ್ಲಿ ಭಾರತ ಫೈನಲ್ ತಲುಪದೇ ಅಚ್ಚರಿ ಮೂಡಿಸಿತ್ತು. ಇದೀಗ ಮಾರ್ಚ್ 16ರಿಂದ ಏಪ್ರಿಲ್ 6ರ ವರೆಗೆ ಬಾಂಗ್ಲಾದೇಶದಲ್ಲಿಯೇ ನಡೆಯಲಿರುವ ವಿಶ್ವಕಪ್ ಟಿ-20 ಸಮರ ಸುಲಭ ಸವಾಲೇನಲ್ಲ.
ಭಾರತ ತಂಡ ಹಿಂದಿನ ಸರಣಿಗಳಲ್ಲಿ ಅನುಭವಿಸಿದ ವೈಫಲ್ಯ ಕುರಿತು ವರದಿ ನೀಡುವಂತೆ ಕೋಚ್ ಡಂಕನ್ ಫ್ಲೆಚರ್‌ಗೆ ಬಿಸಿಸಿಐ ಸೂಚಿಸಿದೆ. ಪ್ರಮುಖವಾಗಿ ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರು ಫ್ಲೆಚರ್‌ಗೆ ಸಮನ್ಸ್ ನೀಡಿರುವ ಬಗ್ಗೆಯೂ ವದಂತಿ ಹಬ್ಬಿದ್ದು, ಇಂದು ತಂಡ ಪ್ರಯಾಣ ಬೆಳೆಸುವ ವೇಳೆ ಕೋಚ್ ಉಪಸ್ಥಿತರಿರಲಿಲ್ಲ.
ಈ ಮಧ್ಯೆ ಮೊದಲ ಬಾರಿಗೆ ಭಾರತ ತಂಡ ಯಾವುದೇ ರೀತಿಯ ಪತ್ರಿಕಾಗೋಷ್ಠಿ ನಡೆಸದೇ ಐಸಿಸಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳಿದೆ. ಏಷ್ಯಾ ಕಪ್‌ನಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಕೂಡ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಲಿಲ್ಲ.
ಐಪಿಎಲ್ ಫಿಕ್ಸಿಂಕ್ ಪ್ರಕರಣದಲ್ಲಿ ತಮ್ಮ ಹೆಸರು ಥಳಕು ಹಾಕಿಕೊಂಡಾಗಿನಿಂದ ಧೋನಿ ಮಾಧ್ಯಮಗಳ ಜೊತೆ ಮಾತನಾಡಿಯೇ ಇಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಜಾರಿಕೊಳ್ಳಲು ಧೋನಿ ಈ ರೀತಿ ಪಲಾಯನ ಮಾಡುತ್ತಿರುವ ಬಗ್ಗೆ ಅನುಮಾನ ಮೂಡಿದೆ.
ಮಾಜಿ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಾರ್ಚ್ 21ರಂದುನಡೆಯಲಿರುವ ಸೂಪರ್-10 ಪಂದ್ಯದಲ್ಲಿ ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮೀರ್‌ಪುರನಲ್ಲಿ ನಡೆಯಲಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೀರ್‌ಪುರನಲ್ಲಿಯೇ ನಡೆದ ಪಂದ್ಯದಲ್ಲಿ ಭಾರತ ಸೋಲನುಭವಿಸುವ ಮೂಲಕ ಫೈನಲ್ ತಲುಪುವ ಆಸೆ ಕೈಬಿಟ್ಟಂತಾಗಿತ್ತು.
ಇದಕ್ಕೂ ಮುನ್ನ 15 ಸದಸ್ಯರ ಟೀಂ ಇಂಡಿಯಾ, ಶ್ರೀಲಂಕಾ (ಮಾ. 17) ಮತ್ತು ಇಂಗ್ಲೆಂಡ್ (ಮಾ.19) ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ.
ಭಾರತ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ, ಮೋಹಿತ್ ಶರ್ಮಾ, ವರುಣ್ ಏರಾನ್.