ಅರ್ಜುನ ಪ್ರಶಸ್ತಿಗೆ ರಘುನಾಥ್ ಹೆಸರು
ನವದೆಹಲಿ: ಭಾರತ ಹಾಕಿ ತಂಡದ ಹಿರಿಯ ಡ್ರ್ಯಾಗ್ ಫ್ಲಿಕರ್ ಕರ್ನಾಟಕದ ವಿ.ಆರ್ ರಘುನಾಥ್ ಸೇರಿದಂತೆ ಒಟ್ಟು ನಾಲ್ವರು ಆಟಗಾರರ ಹೆಸರನ್ನು ಹಾಕಿ ಇಂಡಿಯಾ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
2014ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ವಿ.ಆರ್ ರಘುನಾಥ್ ಜತೆಗೆ ಸ್ಟ್ರೈಕರ್ ಧರಮ್‌ವೀರ್ ಸಿಂಗ್, ತುಶಾರ್ ಖಾಂಡೇಕರ್ ಮತ್ತು ಮಾಜಿ ನಾಯಕ ಭರತ್ ಛೆಟ್ರಿ ಅವರ ಹೆಸರನ್ನು ಶಿಫಾರಸ್ಸು ಮಾಡಿದೆ. ಇದೇವೇಳೆ ಅರ್ಜುನ ಪ್ರಶಸ್ತಿ ಜತೆಗೆ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಹಾಕಿ ಇಂಡಿಯಾ ಹೆಸರನ್ನು ಶಿಫಾರಸ್ಸು ಮಾಡಿದೆ. ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಮಹಿಳಾ ತಂಡದ ಮಾಜಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ತಂಡದ ಮಾಜಿ ಕೋಚ್ ಸುಮ್ರಾಯ್ ಟೆಟೆ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಭಾರತ ಕಿರಿಯ ಮಹಿಳಾ ತಂಡದ ಕೋಚ್ ರೊಮೇಶ್ ಪಥಾನಿಯಾ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.