ಇಂಗ್ಲೆಂಡ್ ಪ್ರವಾಸ ಕಠಿಣ: ಪೂಜಾರ
ನವದೆಹಲಿ: ಪ್ರಸ್ತುತ ಐಪಿಎಲ್ ಪಂದ್ಯಾವಳಿ ಮುಗಿದ ನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ಟಿ20 ಮನಸ್ಥಿತಿಯಿಂದ ಟೆಸ್ಟ್ಗೆ ಹೊಂದಿಕೊಳ್ಳುವುದು ಸವಾಲಾಗಲಿದೆ ಎಂದು ಭಾರತದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಪ್ರವಾಸ ನಮ್ಮ ಪಾಲಿಗೆ ಸುಲಭವಾಗಿರುವುದಿಲ್ಲ. ಆದರೆ ಸಂತಸದ ವಿಚಾರವೆಂದರೆ ನಾವು ಎರಡು ಅಭ್ಯಾಸ ಪಂದ್ಯಗಳನ್ನಾಡುವ ಅವಕಾಶ ಹೊಂದಿದ್ದೇವೆ. ಈ ಅವಕಾಶವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಅಲ್ಲದೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಉತ್ತಮ ರಣತಂತ್ರ ರೂಪಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಪ್ರವಾಸದಲ್ಲಿ ಭಾರತ ತಂಡ ಐದು ಟೆಸ್ಟ್ ಪಂದ್ಯಗಳ ಜತೆಗೆ ಐದು ಏಕದಿನ ಪಂದ್ಯಗಳು ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ.
ಕಳೆದ ಬಾರಿ ಭಾರತ ತಂಡ 2011ರಲ್ಲಿ ಎರಡು ತಿಂಗಳು ಸುದೀರ್ಘ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಭಾರತ ತಂಡ ಗೆಲವಿನ ಮುಖ ನೋಡದೇ ನಿರಾಸೆಯಿಂದ ಭಾರತಕ್ಕೆ ವಾಪಸ್ಸಾಗಿತ್ತು. ಆನಂತರ ಭಾರತ ತಂಡ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯವನ್ನೇ ಗೆದ್ದಿಲ್ಲ. ಟೆಸ್ಟ್ ಸರಣಿಯಲ್ಲಿ 0-4 ಕ್ಲೀನ್ಸ್ವೀಪ್ ಸೋಲನುಭವಿಸಿದ್ದ ಭಾರತ, ನಂತರ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 0-3 ಅಂತರದಲ್ಲಿ ಮಣಿದಿತ್ತು. ಅಲ್ಲದೆ ಏಕೈಕ ಟಿ20 ಪಂದ್ಯದಲ್ಲೂ ಸೋಲನುಭವಿಸಿ ಕೆಟ್ಟ ಪ್ರವಾಸವನ್ನು ಅಂತ್ಯಗೊಳಿಸಿತ್ತು. ಈ ಸರಣಿಯ ಕಹಿ ನೆನಪು ಇನ್ನು ಮಾಸಿಲ್ಲ. ಹಾಗಾಗಿ ಭಾರತ ತಂಡದ ಮುಂದಿನ ಪ್ರವಾಸ ಮಹತ್ವ ಪಡೆದುಕೊಂಡಿದೆ. ಅಲ್ಲಿನ ಪಿಚ್ಗಳು ಭಾರತಕ್ಕಿಂತಲೂ ವಿಭಿನ್ನವಾಗಿರುತ್ತದೆ. ಹಾಗಾಗಿ ಆಟಗಾರರಿಗೆ ದೊಡ್ಡ ಸವಾಲು ಎದುರಾಗಲಿದೆ ಎಂದು ಪೂಜಾರ ತಿಳಿಸಿದರು. ನಾವು ಕಳೆದ ಆರು ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿರುವ ಅನುಭವ, ವೇಗದ ಪಿಚ್ನಲ್ಲಿ ನೆರವಾಗಲಿದೆ.
ಇನ್ನು ಟಿ20 ಕ್ರಿಕೆಟ್ ಬಗ್ಗೆ ಮಾತನಾಡಿದ ಪೂಜಾರ, ಈ ಮಾದರಿಯಲ್ಲಿ ಪ್ರತಿದಿನ ನನ್ನ ಆಟವನ್ನು ವೃದ್ಧಿಸಿಕೊಳ್ಳುತ್ತಿದ್ದೇನೆ. ನನ್ನ ಆಟದ ಕುರಿತು ಮ್ಯಾಕ್ಸ್ವೆಲ್, ಡೇವಿಡ್ ಮಿಲ್ಲರ್ ಹಾಗೂ ವೀರೇಂದ್ರ ಸೆಹ್ವಾಗ್ ಜತೆ ಚರ್ಚಿಸಿದ್ದೇನೆ. ಈ ಮಾದರಿಯಲ್ಲಿ ನಾನು ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.