ದಕ್ಷಿಣ ಕೊಡಗಿನ ಪ್ರಥಮ ಸಿಂಥೆಟಿಕ್ ಟರ್ಫ್ ಸಿದ್ಧ
-ಟಿ.ಎಲ್.ಶ್ರೀನಿವಾಸ್
ಗೋಣಿಕೊಪ್ಪಲು: ಅಂತೂ-ಇಂತೂ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನ ಹಸಿರು ಮೈಸಿರಿಯೊಂದಿಗೆ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನ ಕಂಗೊಳಿಸುತ್ತಿದೆ. 2012 ಡಿಸೆಂಬರ್ನಲ್ಲಿ ಆರಂಭಗೊಂಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಪೊನ್ನಂಪೇಟೆಯ ಕ್ರೀಡಾ ಶಾಲೆ ಹಾಗೂ ಇತರ ಶಾಲಾ ಮಕ್ಕಳು ಇನ್ನು ಮುಂದೆ ಸಿಂಥೆಟಿಕ್ ಮೈದಾನದ ಮೇಲೆ ತಮ್ಮ ಹಾಕಿ ಕೌಶಲ್ಯ ಒರೆಗೆ ಹಚ್ಚಲು ಮೈದಾನ ಸ್ವಾಗತಿಸುತ್ತಿದೆ.
ನೀರು ಸುರಿಯಬೇಕು: ಇನ್ನು ಮಳೆರಾಯನ ಭಯವಿಲ್ಲ. ಮಳೆ ಇಲ್ಲದಿದ್ದಲ್ಲಿ ದಿನಂಪ್ರತಿ ಸರಾಸರಿ ಸುಮಾರು 30 ಸಾವಿರ ಲೀಟರ್ ನೀರನ್ನು ಟರ್ಫ್ ಮೈದಾನದ ಮೇಲೆ ಸುರಿಯಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಆಟ ಸಾಧ್ಯ.
ಮಳೆಗಾಲದಲ್ಲಿ ನಿರ್ವಹಣೆ ವೆಚ್ಚವಿಲ್ಲ. ಪ್ರತಿದಿನ ಮೈದಾನದಲ್ಲಿ ಅಭ್ಯಾಸ ನಡೆಸಬೇಕಿದ್ದರೂ ನೀರನ್ನು ಕಡ್ಡಾಯ ಸುರಿಯಲೇ ಬೇಕು. ಇಲ್ಲವೆ ಮೈದಾನ ಹಾಳಾಗಬಹುದು. ಪ್ರತಿಷ್ಠಿತ ಮೇವರಿಕ್ ಟರ್ಫ್ ಕಾರ್ಪೋರೇಶನ್ ಸಂಸ್ಥೆ ಮೈದಾನವನ್ನು ಸುಮಾರು ರು. 3.33 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ.
ವಿವಾದ ನುಸುಳಿತ್ತು: ಪೊನ್ನಂಪೇಟೆಯಲ್ಲಿ ಸಿಂಥೆಟಿಕ್ ಟರ್ಫ್ ಮೈದಾನ ಮೊದಲಿಗೆ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಅಶ್ವಿನಿ ನಾಚಪ್ಪ ಅವರು ಕಾಲ್ಸ್ ಶಾಲಾ ಆವರಣದಲ್ಲಿ ಸಿಂಥೆಟಿಕ್ ಟರ್ಫ್ ಮೈದಾನ ನಿರ್ಮಾಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿದ್ದರು.
ಈ ಹಂತದಲ್ಲಿ ಪೊನ್ನಂಪೇಟೆಯ ರಂಗಭೂಮಿ ಕಲಾವಿದ ಅಡ್ಡಂಡ ಕಾರ್ಯಪ್ಪ, ಸರ್ಕಾರಿ ಶಾಲಾ ಮೈದಾನದಲ್ಲಿಯೇ ಟರ್ಫ್ ಅಳವಡಿಕೆಯಾಗಬೇಕು, ಖಾಸಗಿ ಶಾಲೆಗೆ ಬೇಡ ಎಂದು ಶಾಲಾ ಮಕ್ಕಳೊಂದಿಗೆ ಧರಣಿ ಕುಳಿತು ಹೋರಾಟ ನಡೆಸಿದ್ದರು.
ಹಲವು ಸಂಘ ಸಂಸ್ಥೆಗಳು ಕೊಡಗು ಹಾಕಿ ಅಕಾಡೆಮಿ ಸಂಸ್ಥೆಯೂ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಸರ್ಕಾರದ ಅನುದಾನ ಕಾಲ್ಸ್ ಶಾಲೆಯಿಂದ ಪೊನ್ನಂಪೇಟೆ ಸರ್ಕಾರಿ ಪ.ಪೂ.ಕಾಲೇಜಿಗೆ ವರ್ಗಾವಣೆಗೊಂಡಿತ್ತು. ಮೈದಾನಕ್ಕೆ ಹೋರಾಟ ಮಾಡಿದ ಅಡ್ಡಂಡ ಕಾರ್ಯಪ್ಪ ಅವರೇ ಪೊನ್ನಂಪೇಟೆ ಪ.ಪೂ. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಮೈದಾನ ವ್ಯಾಪ್ತಿ: ಮೈದಾನ 102 ಮೀಟರ್ ಉದ್ದ ಹಾಗೂ 63 ಮೀಟರ್ ಅಗಲ ಇದ್ದು, ಮೈದಾನದ ಸುತ್ತ ಕಬ್ಬಿಣದ ಬೇಲಿ ನಿರ್ಮಾಣವಾಗಿದ್ದು, 105 ಮೀಟರ್ ಉದ್ದ ಹಾಗೂ 69 ಮೀಟರ್ ಅಗಲವಿದೆ. 1.4 ಮೀಟರ್ ಎತ್ತರವಿದೆ.
ಆಸ್ಟ್ರೇಲಿಯಾದ ಗ್ರಾಸ್ಮ್ಯಾನ್ ಕಂಪನಿಯ ವೆಟ್ ಸಿಸ್ಟಂ ಹೊದಿಕೆಯನ್ನು ಮೈದಾನಕ್ಕೆ ಅಳವಡಿಸಲಾಗಿದ್ದು, ಇದೀಗ ತೆರೆದ ಬಾವಿ ಹಾಗೂ ವಿದ್ಯುತ್ ಸಂಪರ್ಕ ಕಾಮಗಾರಿ ಬಾಕಿ ಉಳಿದಿದೆ. ನೀರು ಹಾಯಿಸಲು ಬೇಕಾದ ಉಪಕರಣ ಸಿದ್ಧವಿದ್ದು, ನಿರ್ವಹಣೆಗೆ ಓರ್ವ ಸಿಬ್ಬಂದಿ ನೇಮಕವಾಗಬೇಕಾಗಿದೆ.
ನಿರ್ವಹಣೆ ಮಡಿಕೇರಿ ಸಿಂಥೆಟಿಕ್ ಮೈದಾನದ ಮಾದರಿಯೇ ಮಾಡಬೇಕಿದ್ದು, ಕನಿಷ್ಠ ರು. 10-15 ಸಾವಿರ ಮಾಸಿಕ ವೆಚ್ಚ ತಗಲುವ ಸಾಧ್ಯತೆ ಇದೆ. ಸುಮಾರು 1 ಲಕ್ಷ ಲೀಟರ್ ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ.
ಜೂನ್ನಲ್ಲಿ ದಕ್ಷಿಣ ಕೊಡಗಿನ ಪ್ರಪ್ರಥಮ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಕೌಟುಂಬಿಕ ಕೂಟಕ್ಕೂ ಅನುಕೂಲ
ಮುಂದಿನ ವರ್ಷದ ಕುಪ್ಪಂಡ ಕಪ್ ಕೊಡವ ಕೌಟುಂಬಿಕ ಕಪ್ ಹಾಕಿ ಪಂದ್ಯಾವಳಿಯನ್ನೂ ವಿರಾಜಪೇಟೆಯಲ್ಲಿಯೇ ನಡೆಸುವ ಬಗ್ಗೆ ಚರ್ಚೆಯಾಗುತ್ತಿದೆ. ಇತ್ತ ಅಳಮೇಂಗಡ ಕಪ್, ಚೆಪ್ಪುಡಿರ ಕಪ್, ಕಳ್ಳಿಚಂಡ ಕಪ್, ಮಚ್ಚಾಮಾಡ ಕಪ್, ಮನೆಯಪಂಡ ಕಪ್ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಪೊನ್ನಂಪೇಟೆ ಸರ್ಕಾರಿ ಕಾಲೇಜು ಮೈದಾನದಲ್ಲಿ ಯಶಸ್ವಿಯಾಗಿ ನಡೆದು ಜನಮನ್ನಣೆಗೆ ಪಾತ್ರವಾಗಿತ್ತು. ನೂತನ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ಯಾವ ಕೌಟುಂಬಿಕ ತಂಡ ಹಾಕಿ ಹಬ್ಬವನ್ನು ಮೊದಲಿಗೆ ನಡೆಸಬಹುದು ಎಂಬ ಕುತೂಹಲ ಹಾಕಿ ಪ್ರಿಯರಲ್ಲಿ ಮೂಡಿದೆ.