ಶ್ರೀನಿ ತಾಳಕ್ಕೆ ಬಿಸಿಸಿಐ ಕುಣಿತ: ಅಬ್ದಿ ವ್ಯಂಗ್ಯ
ನವದೆಹಲಿ: ಬಿಸಿಸಿಐ ಹಾಗೂ ಅಮಾನತುಗೊಂಡಿರುವ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ನಡುವಣ ಕಿತ್ತಾಟ ಮುಂದುವರಿದಿದ್ದು, ಬಿಸಿಸಿಐ ಎನ್.ಶ್ರೀನಿವಾಸನ್ ಅವರ ತಾಳಕ್ಕೆ ಕುಣಿಯುತ್ತಿದೆ ಎಂದು ಆರ್‌ಸಿಎ ನೂತನ ಉಪಾಧ್ಯಕ್ಷ ಮೊಹ್‌ಮೂದ್ ಅಬ್ದಿ ತಿಳಿಸಿದ್ದಾರೆ.
ಶ್ರೀನಿವಾಸನ್ ಅವರ ಪ್ರತೀಕಾರ, ದ್ವೇಷ, ಹಾಗೂ ಅಸೂಹೆಯನ್ನು ತೃಪ್ತಿ ಪಡಿಸುವ ರೀತಿಯಲ್ಲಿ ಬಿಸಿಸಿಐ ಕಾರ್ಯನಿರ್ವಹಿಸುತ್ತಿದೆ ಎಂದು ಅಬ್ದಿ ಆರೋಪ ಮಾಡಿದ್ದಾರೆ.
ಲಲಿತ್ ಮೊದಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾಗಿದ್ದರೂ, ಕಾನೂನು ಬಾಹೀರವಾಗಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಕಾನೂನಿನ ಚೌಕಟ್ಟಿನಲ್ಲೇ ಮೋದಿ ಅವರನ್ನು ವಜಾ ಮಾಡಲಾಗಿದೆ ಎಂದು ಬಿಸಿಸಿಐ ಸಮರ್ಥನೆ ನೀಡಿತ್ತು.
ಬಿಸಿಸಿಐನ ಈ ನಿರ್ಧಾರ ಅದರ ದುರಹಂಕಾರ, ಹಾಗೂ ಸ್ಥಳೀಯ ಕಾನೂನಿನ ಮೇಲಿನ, ಸಾರ್ವಜನಿಕ ಭಾವನೆಗೆ ಅಗೌರವವನ್ನು ತೋರುತ್ತದೆ. ಆರ್‌ಸಿಎ ಅನ್ನು ವಜಾಗೊಳಿಸಿರುವ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ.
ವೈಯಕ್ತಿಕ ಉದ್ದೇಶ ಕೇಂದ್ರಿಕೃತವಾದ ಬಿಸಿಸಿಐನ ಈ ನಿರ್ಧಾರ ದುರಾದೃಷ್ಟಕರವಾಗಿದೆ. ಈ ಮೂಲಕ ಬಿಸಿಸಿಐ ನಂಬಿಕಾರ್ಹತೆಯನ್ನು ಕಳೆದುಕೊಂಡಿದ್ದು, ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬಾರಿ ಬಿಸಿಸಿಐ ಶ್ರೀನಿವಾಸನ್ ಅವರಿಗೆ ಅನುಕೂಲವಾಗುವಂತೆ ತನ್ನ ಕಾನೂನನ್ನು ಬದಲಿಸಿಕೊಂಡಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ.