ಡೆವಿಲ್ಸ್‌ಗೆ ಸನ್ ಗೆಲ್ಲುವಾಸೆ
ನವದೆಹಲಿ: ನಿರಂತರ ಮೂರು ಸೋಲುಗಳಿಂದ ಕಂಗೆಟ್ಟಿರುವ ಮತ್ತು ಐಪಿಎಲ್ ಪಂದ್ಯಾವಳಿಯಲ್ಲಿ ತನ್ನ ಉಳಿದ ಎಲ್ಲ ಪಂದ್ಯಗಳಲ್ಲೂ ಜಯ ಕಂಡುಕೊಳ್ಳಬೇಕಾದ ಅಗತ್ಯವಿರುವ ದುರ್ಬಲ ಡೆಲ್ಲಿ ಡೇರ್‌ಡೆವಿಲ್ಸ್ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಬಾಕಿ ಉಳಿದಿರುವ ತನ್ನ ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಪಂದ್ಯಕ್ಕೆ ಅರ್ಹತೆ ಪಡೆಯಲು ಡೆಲ್ಲಿಗೆ ಸಾಧ್ಯವಾಗಲಿದೆ.ಇದುವರೆಗೆ ಕೇವಲ 8 ಪಂದ್ಯಗಳಲ್ಲಿ ಆಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೀಗಾಗಿ ಕೆವಿನ್ ಪೀಟರ್ಸನ್ ತಂಡ ನಾಕೌಟ್ ಹಂತ ತಲುಪಬೇಕಾದರೆ ಪವಾಡವೇ ನಡೆಯಬೇಕಾಗಿದೆ.ಯುಎಇಯಲ್ಲಿ ಮಾತ್ರ ಎರಡು ಪಂದ್ಯಗಳಲ್ಲಿ ಜಯ ಕಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್, ನಂತರ ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲೂ ಸೋಲನುಭವಿಸಿದೆ. ತವರಿನ ಅಂಗಣದಲ್ಲೇ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವುದು ತಂಡವನ್ನು ತೀವ್ರ ಆತಂಕಕ್ಕೊಳಪಡಿಸಿದೆ.
ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಅಂತರದಿಂದ ಸೋಲನುಭವಿಸಿದ್ದ ಡೆಲ್ಲಿ, ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಸೋಲನುಭವಿಸಿತ್ತು.ಸೋಲಿನ ಸರಪಳಿಯೊಂದಿಗೆ ಕಂಗೆಟ್ಟಿರುವ ಡೇರ್‌ಡೆವಿಲ್ಸ್, ಅಚ್ಚರಿಯ ಜಯ ಕಾಣುವ ಮೂಲಕ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ.ಇದುವರೆಗೂ ಸ್ಥಿರವಲ್ಲದ ಬ್ಯಾಟಿಂಗ್ ಮತ್ತು ಬೌಲರ್‌ಗಳ ದುರ್ಬಲ ಪ್ರದರ್ಶನ ತಂಡದ ವಿಶ್ವಾಸವನ್ನು ಕುಗ್ಗಿಸಿದೆ. ಮೊಹ್ಮದ್ ಶಮಿ, ವ್ಯಾಯ್ನ್ ಪಾರ್ನೆಲ್, ಸಿದ್ಧಾರ್ಥ್ ಕೌಲ್ ಹಾಗೂ ಶಹಬಾಜ್ ನದೀಂ ಅವರ ಪ್ರದರ್ಶನ ಇದುವರೆಗೂ ತಂಡ ಗೆಲ್ಲಲು ನೆರವಾಗಿಲ್ಲ.ನಾಯಕ ಕೆವಿನ್ ಪೀಟರ್ಸನ್ ಸೇರಿದಂತೆ ತನ್ನ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಾಣುತ್ತಿರುವುದು ತಂಡಕ್ಕೆ ತೀವ್ರ ಆತಂಕವಾಗಿ ಪರಿಣಮಿಸಿದೆ. ಇದುವರೆಗೂ ಐದು ಇನಿಂಗ್ಸ್‌ಗಳಲ್ಲಿ ಆಡಿರುವ ನಾಯಕ ಪೀಟರ್ಸನ್ ಅವರು ಕೇವಲ 62 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.ಅಲ್ಲದೆ, ಭಾರತ ತಂಡದ ಯಶಸ್ವಿ ಕೋಚ್ ಎನಿಸಿದ್ದ ಗ್ಯಾರಿ ಕರ್ಸ್ಟನ್ ಅವರು, ಇದೆ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ, ಯಶಸ್ಸು ಸಿಗದಿರುವುದು ಅವರಿಗೆ ನಿರಾಸೆ ಮೂಡಿಸಿದೆ.ಇನ್ನೊಂದೆಡೆ, ರಾಜಸ್ಥಾನ ರಾಯಲ್ಸ್ ವಿರುದ್ಧ 32 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ವಿಶ್ವಾಸಕ್ಕೆ ಮರಳಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ವಿರುದ್ಧ ಗೆದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಕಾತರದಲ್ಲಿದೆ.ಆಡಿರುವ 7 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಸನ್‌ರೈಸರ್ಸ್ ತಂಡ 5ನೇ ಸ್ಥಾನದಲ್ಲಿದೆ.
ಆದರೆ, ಡೆಲ್ಲಿ ತಂಡದಂತೆ ತನ್ನ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡದಿರುವುದು ಸನ್‌ರೈಸರ್ಸ್ ತಂಡದಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ, ರಾಜಸ್ಥಾನದ ವಿರುದ್ಧ ಕೇವಲ 134 ರನ್ ಗಳಿಸಿದ್ದ ಸನ್‌ರೈಸರ್ಸ್ ತಂಡದ ಬೌಲರ್‌ಗಳು ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸ್ಥಿರವಲ್ಲದ ಬ್ಯಾಟಿಂಗ್ ಹೊಂದಿರುವ ಡೆಲ್ಲಿ ವಿರುದ್ಧ ಹೈದರಾಬಾದ್ ಗೆಲ್ಲುವ ಫೇವರಿಟ್ ಎನಿಸಿದೆ. ಭುವನೇಶ್ವರ ಕುಮಾರ್, ಡೇಲ್ ಸ್ಟೇಯ್ನ್, ಕರಣ್ ಶರ್ಮಾ, ಮೋಯ್ಸಿಸ್ ಹೆನ್ರೀಕೇಸ್ ಹಾಗೂ ಇರ್ಫಾನ್ ಪಠಾಣ್ ಅವರು ಹೈದರಾಬಾದ್ ಪರ ಗಮನ ಸೆಳೆಯುವ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.
ಸ್ಥಳ-ಫಿರೋಜ್ ಷಾ ಕೋಟ್ಲಾ-ದೆಹಲಿ, ಸಮಯ-ಸಂಜೆ 4 ಗಂಟೆ