ಪ್ರಶಸ್ತಿ ಸುತ್ತಿಗೆ ಗುಲ್ಬರ್ಗಾ, ಹುಬ್ಬಳ್ಳಿ ಕ್ಲಬ್
ಬೆಳಗಾವಿ: ಗುಲ್ಬರ್ಗಾ ಮತ್ತು ಹುಬ್ಬಳ್ಳಿ ಯಂಗ್ ಸ್ಟಾರ್ ಸ್ಫೋರ್ಟ್ಸ್ ಕ್ಲಬ್ ತಂಡಗಳು ಫೈನಲ್ ಪ್ರವೇಶಿಸಿವೆ.
ನಗರದ ಕ್ಯಾಂಪ್‌ನ ಮೇಜರ್ ಬಿ.ಎ. ಸಯ್ಯದ ಮೆಮೋರಿಯಲ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಈ ಎರಡೂ ತಂಡಗಳು ಭರ್ಜರಿ ವಿಜಯ ದಾಖಲಿಸಿವೆ. ಶನಿವಾರ ಈ ಎರಡೂ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹುಬ್ಬಳ್ಳಿಯ ವಾಸು ಸ್ಫೋರ್ಟ್ಸ್ ಕ್ಲಬ್ ಮತ್ತು ಬೆಳಗಾವಿ ಬಿ. ತಂಡಗಳು ಸೆಣಸಾಡಲಿವೆ.
ಗುಲ್ಬರ್ಗಾಕ್ಕೆ ಗೆಲವು: ಶುಕ್ರವಾರ ಬೆಳಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗುಲ್ಬರ್ಗಾ ತಂಡವು ಹುಬ್ಬಳ್ಳಿಯ ವಾಸು ಸ್ಫೋರ್ಟ್ಸ್ ಕ್ಲಬ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.
ಯಂಗ್ ಸ್ಟಾರ್‌ಗೆ ಜಯ: ಅನಂತರ ನಡೆದ ಎರಡನೇ ಸೆಮಿಫೈಲನ್‌ನಲ್ಲಿ ಹುಬ್ಬಳ್ಳಿಯ ಯಂಗ್ ಸ್ಟಾರ್ ಕ್ಲಬ್ ತಂಡವು ಬೆಳಗಾವಿ (ಬಿ) ತಂಡವನ್ನು 10-1 ಗೋಲುಗಳ ಭಾರೀ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯ ಏಕಪಕ್ಷೀಯವಾಗಿತ್ತು.
ಶನಿವಾರ ಮಧ್ಯಾಹ್ನ 3.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ಮಧ್ಯಾಹ್ನ 2 ಗಂಟೆಗೆ ತೃತೀಯ ಮತ್ತು ನಾಲ್ಕನೇ ಸ್ಥಾನಕ್ಕೆ ಪಂದ್ಯ ನಡೆಯಲಿದೆ.