ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಂಬೈ- ಚೆನ್ನೈ ಮಧ್ಯೆ ಜಿದ್ದಾಜಿದ್ದಿನ ಕದನ ನಿರೀಕ್ಷೆ

Srinivasa Murthy VN
Updated On : 9 May 2014, 11:22 am

ಮುಂಬೈ: ಯುಎಇನಲ್ಲಿ ಅನುಭವಿಸಿದ ಸತತ ಐದು ಸೋಲುಗಳ ನಂತರ ತವರಿನಲ್ಲಿ ಮೈಕೊಡವಿ ಮೇಲೆದ್ದು ಬಂದಿರುವ ಮೂಲಕ ಹೋರಾಟದ ಹಾದಿಗೆ ಮರಳಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಟಗಾರರು ಈಗ ಮತ್ತೊಂದು ನಿಚ್ಚಳ ಗೆಲವಿನ ವಿಶ್ವಾಸದಲ್ಲಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಂಬೈ ಇಂಡಿಯನ್ಸ್ ತಂಡ ಎರಡು ಬಾರಿಯ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ದುಬೈನಲ್ಲಿ ನಡೆದ ಮೊದಲ ಸುತ್ತಿನ ಸೆಣಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸುಲಭ ಗೆಲವು ದಾಖಲಿಸಿತ್ತು. ಈಗ ಅದೇ ಫಲಿತಾಂಶ ಪುನರಾವರ್ತಿಸುವ ವಿಶ್ವಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವಿದೆ.
ಆದರೆ, ಇನ್ನುಳಿದ ತನ್ನ ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಸಹ ನಾಕೌಟ್ ಹಾದಿಯನ್ನು ಅನುಮಾನವಾಗಿಸಿಕೊಳ್ಳಬೇಕಾಗುವ ಸ್ಥಿತಿಗೆ ಸಿಲುಕುವ ಭೀತಿಯಲ್ಲಿರುವ ಕಾರಣ ಮುಂಬೈ ಇಂಡಿಯನ್ಸ್ ಹೇಗಾದರೂ ಮಾಡಿ ಗೆದ್ದೇ ತೀರಬೇಕೆಂದು ಪಣತೊಟ್ಟಿದೆ.
ಕಳೆದ ಎರಡು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರುಗಳಂತಹ ದಿಗ್ಗಜ ತಂಡಗಳನ್ನು ಮಣಿಸಿರುವ ಮುಂಬೈ ಇಂಡಿಯನ್ಸ್ ಆಟಗಾರರಲ್ಲಿ ಆತ್ಮವಿಶ್ವಾಸ ಇಮ್ಮುಡಿಗೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೈಕ್ ಹಸ್ಸಿ, ಅಂಬಟಿ ರಾಯುಡು, ಕೀರನ್ ಪೊಲಾರ್ಡ್, ಕೋರೆ ಆ್ಯಂಡರ್ಸನ್, ಲಸಿತ್ ಮಾಲಿಂಗ, ಹರ್‌ಭಜನ್ ಸಿಂಗ್, ಪ್ರಗ್ಯಾನ್ ಓಜಾ ಮತ್ತು ಪ್ರವೀಣ್‌ಕುಮಾರ್ ಹೆಚ್ಚು ಅಂತಾರಾಷ್ಟ್ರೀಯ ಅನುಭವವುಳ್ಳ ಆಟಗಾರರಾಗಿದ್ದಾರೆ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಸಹ ಕಳೆದ ಪಂದ್ಯದಲ್ಲಿ ಚೆನ್ನೈ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕಠಿಣ ಶಿಕ್ಷೆಗೆ ಒಳಗಾಗಿ 44 ರನ್‌ಗಳ ಅವಮಾನಕಾರಿ ಸೋಲು ಕಂಡಿತ್ತು.
ಇಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಬ್ಯಾಟ್ಸ್‌ಮನ್‌ಗಳು ಚೆನ್ನೈ ದಾಳಿಯನ್ನು ಧೂಳೀಪಟ ಮಾಡುವ ಮೂಲಕ 4 ವಿಕೆಟ್ ನಷ್ಟಕ್ಕೆ 231 ರನ್‌ಗಳ ಬೃಹತ್ ಮೊತ್ತ ಗಳಿಸಿದ್ದರು. ಹಾಗಾಗಿ, ಚೆನ್ನೈ ದಾಳಿಕಾರರು ಈಗ ಕೊಂಚ ಒತ್ತಡದಲ್ಲಿದ್ದಾರೆ.
ಸಮರ್ಥ ನಾಯಕ ಮಹೇಂದ್ರ ಸಿಂಗ್ ಸಾರಥ್ಯದ ಚೆನ್ನೈ ತಂಡದಲ್ಲಿ ಸುರೇಶ್ ರೈನಾ, ಬ್ರೆಂಡನ್ ಮೆಕಲಂ, ಡ್ವೈನ್ ಸ್ಮಿತ್, ಫಫ್ ಡು ಪ್ಲೆಸಿಸ್ ಅಪಾಯಕಾರಿ ದಾಂಡಿಗರಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಸಾಮುಯೆಲ್ ಬದ್ರಿಯ ಸ್ಪಿನ್ ಚಮತ್ಕಾರದ ಜೊತೆಗೆ ಆಲ್‌ರೌಂಡರ್ ರವೀಂದ್ರ ಜಡೇಜಾ, ಆರ್. ಅಶ್ವಿನ್ ಹಾಗೂ ವೈಗದ ದಾಳಿಯಲ್ಲಿ ಮೊಹಿತ್ ಶರ್ಮಾ, ಬೆಲ್ ಹಿಲ್‌ಫೆನ್ಹಾಸ್, ಈಶ್ವರ್ ಪಾಂಡೆ ಭರವಸೆ ಮೂಡಿಸಿದ್ದಾರೆ. ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿನ ಸೋಲಿನ ಕಹಿ ಮರೆತು ಮತ್ತೆ ಗೆಲವಿನ ಹಾದಿಗೆ ಮರಳಲು ಉತ್ತಮ ಅವಕಾಶವನ್ನು ಹೊಂದಿದೆ. ಆದರೆ, ತವರಿನಲ್ಲಿ ಮುಂಬೈ ಇಂಡಿಯನ್ಸ್ ಹೆಚ್ಚು ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಚೆನ್ನೈಗೆ ಕಠಿಣ ಸವಾಲನ್ನೇ ಒಡ್ಡುವ ನಿರೀಕ್ಷೆಯಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.

(ಸ್ಥಳ-ವಾಂಖೆಡೆ ಕ್ರೀಡಾಂಗಣ-ಮುಂಬೈ,
ಸಮಯ-ರಾತ್ರಿ 8 ಗಂಟೆ)

ಅಂಕಪಟ್ಟಿ
ತಂಡ    ಪಂದ್ಯ    ಜಯ    ಸೋಲು    ಅಂಕ    ಸರಾಸರಿ

ಕಿಂಗ್ಸ್ ಇಲೆವೆನ್ ಪಂಜಾಬ್    7    6    1    12    ೤1.214
ಚೆನ್ನೈ ಸೂಪರ್ ಕಿಂಗ್ಸ್    8    6    2    12    ೤0.640
ರಾಜಸ್ಥಾನ ರಾಯಲ್ಸ್    8    5    3    10    ೤0.204
ಕೋಲ್ಕತಾ ನೈಟ್ ರೈಡರ್ಸ್    8    3    5    6    -0.097
ಸನ್‌ರೈಸರ್ಸ್ ಹೈದರಾಬಾದ್    7    3    4    6    -0.257
ರಾಯಲ್ ಚಾಲೆಂಜರ್ಸ್ ಬೆಂಗಳೂರು    7    3    4    6    -0.266
ಮುಂಬೈ ಇಂಡಿಯನ್ಸ್    7    2    5    4    -0.488
ಡೆಲ್ಲಿ ಡೇರ್‌ಡೆವಿಲ್ಸ್    8    2    6    4    -0.933

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement