ರೇಲ್ ವೀಲ್‌ಗೆ ಜಯ
ಬೆಂಗಳೂರು: ರೇಲ್ ವೀಲ್ ಫ್ಯಾಕ್ಟರಿ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರೇಲ್ ವೀಲ್ ಫ್ಯಾಕ್ಟರಿ ತಂಡ 1-0 ಗೋಲಿನಿಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ತಂಡದ ವಿರುದ್ಧ ಗೆಲವು ದಾಖಲಿಸಿತು.
ಪಂದ್ಯದ 45ನೇ ನಿಮಿಷದಲ್ಲಿ ರಾಜೇಶ್ ಗೋಲು ಗಳಿಸಿ ರೇಲ್ ತಂಡಕ್ಕೆ ಗೆಲವು ತಂದುಕೊಟ್ಟರು.
ಈ ಮಧ್ಯೆ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಂಡ 3-0 ಗೋಲುಗಳಿಂದ ಪೋಸ್ಟಲ್ ತಂಡವನ್ನು ಸುಲಭವಾಗಿ ಮಣಿಸಿತು. ವಿಜೇತ ಕ್ರೀಡಾ ಪ್ರಾಧಿಕಾರ ತಂಡದ ಪರ ಸಮಾನಾನಂದ ಸಿಂಗ್ 34ನೇ ನಿಮಿಷ ಮತ್ತು 42ನೇ ನಿಮಿಷ ಪೆನಾಲ್ಟಿಯಲ್ಲಿ ಗೋಲು ಬಾರಿಸಿದರು. ರಜಾಕ್ ಅಹ್ಮದ್ ಪಂದ್ಯದ 75ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲು ದಾಖಲಿಸಿದರು.
ಪಂದ್ಯದ 34ನೇ ನಿಮಿಷದಲ್ಲಿ ಜಗದೀಶ್ ಕೆಂಪು ಕಾರ್ಡ್ ಪಡೆದು ಹೊರನಡೆದಿದ್ದರಿಂದ ಪೋಸ್ಟಲ್ ತಂಡ ಉಳಿದ ಆಟದಲ್ಲಿ ಒಬ್ಬ ಆಟಗಾರನ ಕೊರತೆಯಲ್ಲಿಯೇ ತನ್ನ ಹೋರಾಟ ಮುಂದುವರಿಸಿತು. ಇದರ ಲಾಭವನ್ನು ಕ್ರೀಡಾ ಪ್ರಾಧಿಕಾರ ಪಡೆದುಕೊಂಡಿತು. ಇನ್ನು ಪಂದ್ಯದ 70ನೇ ನಿಮಿಷದ ಆಟದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ದೀಪಕ್ ಸಿಂಗ್ ಕೆಂಪು ಕಾರ್ಡ್ ಪಡೆಯುವ ಮೂಲಕ ಮೈದಾನ ತೊರೆದರು. ಆದರೆ, ಇದರಿಂದ ಪೋಸ್ಟಲ್‌ಗೆ ಯಾವುದೇ ಲಾಭವಾಗಲಿಲ್ಲ.
ಶನಿವಾರ ವಿಶ್ರಾಂತಿ ದಿನವಾಗಿದ್ದು, ಭಾನುವಾರ ಸೂಪರ್ ಡಿವಿಜನ್ ಪಂದ್ಯಗಳು ನಡೆಯಲಿವೆ.