ಐಪಿಎಲ್: ಚಿನ್ನಸ್ವಾಮಿ ಅಂಗಣಕ್ಕೆ ಫೈನಲ್ ಭಾಗ್ಯ
ಮುಂಬೈ: ಪ್ರಸಕ್ತ ಐಪಿಎಲ್ ಪಂದ್ಯಗಳನ್ನು ನಡೆಸಲು ಚೆನ್ನೈನ ಎಂ.ಎ ಚಿದಂಬರಮ್ ಕ್ರೀಡಾಂಗಣದಲ್ಲಿ ಆಯೋಜಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವು ಪಂದ್ಯಗಳ ಸ್ಥಳ ಬದಲಾವಣೆಯಾಗಿದ್ದು, ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಶನಿವಾರ ಇಲ್ಲಿನ ಕ್ರಿಕೆಟ್ ಸೆಂಟರ್ನಲ್ಲಿ ಐಪಿಎಲ್ ಆಡಳಿತ ಮಂಡಳಿಯು ಸಭೆ ನಡೆಸಿದ್ದು, ಐಪಿಎಲ್ ಕೆಲವು ಪಂದ್ಯಗಳ ಸ್ಥಳಗಳ ಬದಲಾವಣ ಮಾಡಲಾಗಿದೆ.
ಮೇ 14ರಂದು ಕೋಲ್ಕತಾದಲ್ಲಿ ನಡೆಯಬೇಕಿದ್ದ ಕೊಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿದೆ.
ಕಾರಣಾಂತರಗಳಿಂದ ಚೆನ್ನೈನ ಎಂ.ಎ ಚಿದಂಬರಮ್ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅವಕಾಶ ನೀಡಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಹಾಗಾಗಿ ಮೇ 18 ಮತ್ತು 22ರಂದು ನಡೆಯಬೇಕಿದ್ದ ಸಿಎಸ್ಕೆ ಪಂದ್ಯಗಳನ್ನು ರಾಂಚಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ರಾಂಚಿ ಈ ಆವೃತ್ತಿಯಲ್ಲಿ ಸಿಎಸ್ಕೆ ತವರು ಅಂಗಣವಾಗಲಿದೆ.
ಇನ್ನು ಐಪಿಎಲ್ನ ಮೊದಲ ಹಂತದಲ್ಲಿ 20 ಪಂದ್ಯಗಳು ಯುಎಇನಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ಲೇ ಆಫ್ನ ಪ್ರತಿ ಪಂದ್ಯವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಕೋಲ್ಕತಾದಲ್ಲಿ, ಎಲಿಮಿನೇಟರ್ ಪಂದ್ಯ ಕಟಕ್ನಲ್ಲಿ, ಎರಡನೇ ಕ್ವಾಲಿಫೈಯರ್ ಪಂದ್ಯ ಮುಂಬೈನಲ್ಲಿ ಹಾಗೂ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಸಭೆಯಲ್ಲಿ ಆರ್ಸಿಬಿ ತಂಡದ ಮಿಚೆಲ್ ಸ್ಟಾರ್ಕ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್ ನಡುವಣ ಕಿತ್ತಾಟದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಘಟನೆ ಕ್ರೀಡಾ ಸ್ಫೂರ್ತಿಯ ವಿರುದ್ಧವಾಗಿದ್ದು, ಈ ರೀತಿಯಾದ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಎಲ್ಲಾ ತಂಡಗಳ ನಾಯಕರು, ಕೋಚ್ ಹಾಗೂ ತಂಡಗಳ ಮ್ಯಾನೇಜರ್ಗಳಿಗೆ ತಿಳಿಸಲಾಗಿದೆ.
ಪ್ಲೇ ಆಫ್ ಪಂದ್ಯಗಳ ಸ್ಥಳಗಳು:
- ಮೇ 27ರ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ (ಮೇ 28 ಮೀಸಲು ದಿನ, ಸಮಯ ಸಂಜೆ 4ಕ್ಕೆ).
- ಮೇ 28ರಂದು ಎಲಿಮಿನೇಟರ್ ಪಂದ್ಯವನ್ನು ಮುಂಬೈನ ಬ್ರಬೊರ್ನ್ ಕ್ರೀಡಾಂಗಣದಲ್ಲಿ (ಮೇ 29 ಮೀಸಲು ದಿನ, ಸಮಯ ಸಂಜೆ 4ಕ್ಕೆ).
- ಮೇ 30ರಂದು ಎರಡನೇ ಕ್ವಾಲಿಫೈಯರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (ಮೀಸಲು ದಿನವಿಲ್ಲ).
- ಜೂನ್ 1ರಂದು ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (ಜೂನ್ 2 ಮೀಸಲು ದಿನ,ಸಮಯ 8ಕ್ಕೆ)