ಗೆಲವಿನ ಹುಡುಕಾಟದಲ್ಲಿ ಆರ್ಸಿಬಿ
-ಸೋಮಶೇಖರ ಪಿ. ಭದ್ರಾವತಿ
ಬೆಂಗಳೂರು: ಸೋಲಿನ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 7ನೇ ಆವೃತ್ತಿಯ ಪ್ಲೇ ಆಫ್ ಹಂತಕ್ಕೆ ತಲುಪಲು ಗೆಲವಿನಹಾದಿಯಲ್ಲಿ ಸಾಗಲೇಬೇಕಾದ ಒತ್ತಡದಲ್ಲಿದೆ. ಹಾಗಾಗಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲವು ಸಾಧಿಸಲು ಸಜ್ಜಾಗಿದೆ.
ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲವು ದಾಖಲಿಸುವ ಮೂಲಕ ಅದ್ಭುತ ಆರಂಭ ಪಡೆದಿದ್ದ ಆರ್ಸಿಬಿ ನಂತರದ ಪಂದ್ಯದಲ್ಲಿ ತನ್ನ ಲಯವನ್ನು ಕಳೆದುಕೊಳ್ಳುತ್ತಾ ಸಾಗಿದೆ. ಇದುವರೆಗೂ ಆಡಿರುವ ಎಂಟು ಪಂದ್ಯಗಳಲ್ಲಿ 3ರಲ್ಲಿ ಗೆಲವು ದಾಖಲಿಸಿ 5ರಲ್ಲಿ ಸೋಲನುಭವಿಸಿರುವ ಆರ್ಸಿಬಿ ಕೇವಲ 6 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಆರ್ಸಿಬಿ ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಮುಂದಿನ ಆರು ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳಲ್ಲಾದರೂ ಗೆಲವು ದಾಖಲಿಸಬೇಕು. ಹಾಗಾಗಿ ಆರ್ಸಿಬಿ ತಂಡ ಮತ್ತೆ ಗೆಲವಿನ ಹಾದಿಗೆ ಮರಳಲು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ ಮಹತ್ವದ್ದಾಗಿ ಪರಿಣಮಿಸಿದೆ.
ತಂಡಗಳ ಬಲಾಬಲ: ಇನ್ನು ಆರ್ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಣ ಬಲಾಬಲವನ್ನು ನೋಡುವುದಾದರೆ, ಪ್ರದರ್ಶನದ ಆಧಾರದ ಮೇಲೆ ರಾಜಸ್ಥಾನ ಮೇಲುಗೈ ಸಾಧಿಸಲಿದೆ. ಕಾಗದದ ಮೇಲೆ ಆರ್ಸಿಬಿ ತಂಡ ಬಲಿಷ್ಠವಾಗಿ ಕಾಣುತ್ತಿದೆಯಾದರೂ, ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇನ್ನು ಸಾಂಘಿಕ ಪ್ರದರ್ಶನದಿಂದ ಪಂದ್ಯಾವಳಿಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ರಾಜಸ್ಥಾನ, ಯಾವ ರೀತಿ ಆಡಲಿದೆ ಎಂಬುದು ಗಮನ ಸೆಳೆಯಲಿದೆ.
ಯುಎಇಯಲ್ಲಿ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲವಿನ ನಗೆ ಬೀರಿತ್ತು. ಆ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಆರ್ಸಿಬಿ, 70 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲಿನ ಹಾದಿ ಹಿಡಿದಿತ್ತು. ಹಾಗಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆರ್ಸಿಬಿಗೆ ಅವಕಾಶವಿದೆ. ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದು ಆರ್ಸಿಬಿ ತಂಡದ ಮೊದಲ ಆದ್ಯತೆಯಾಗಿದೆ. ಇನ್ನು ಬೌಲರ್ಗಳು ಶಿಸ್ತು ಬದ್ಧ ಬೌಲಿಂಗ್ ನಡೆಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಇತರೆ ರನ್ ನೀಡಬಾರದು. ಆಗ ಮಾತ್ರ ಬ್ಯಾಟ್ಸ್ಮನ್ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಸ್ ಗೇಯ್ಲ್ ಹಾಗೂ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಇನ್ನು ಯುವರಾಜ್, ತಮ್ಮ ವೈಫಲ್ಯದಿಂದ ಹೊರ ಬರಬೇಕಿದೆ. ರಾಜಸ್ಥಾನ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿತ್ತು. ಹಾಗಾಗಿ ಕಳೆದ ಪಂದ್ಯದ ಸೋಲನ್ನು ರಾಜಸ್ಥಾನ ತಂಡ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬೇಕಿದೆ. ಅಲ್ಲದೆ ಎಂದಿನಂತೆ ಸಂಘಟಿತ ಬೌಲಿಂಗ್ ದಾಳಿ ನಡೆಸಿದರೆ, ಆರ್ಸಿಬಿ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಬಹುದು. ಬ್ಯಾಟಿಂಗ್ನಲ್ಲೂ ಎಲ್ಲಾ ಬ್ಯಾಟ್ಸ್ಮನ್ಗಳು ತಂಡಕ್ಕೆ ಅಗತ್ಯ ರೀತಿಯಲ್ಲಿ ನೆರವಾಗುತ್ತಿದ್ದು ಅದೇ ಪ್ರದರ್ಶನ ಮುಂದುವರಿಸಿದರೆ, ಗೆಲವಿನ ಹಾದಿ ಸುಗಮವಾಗಲಿದೆ.
ಒಟ್ಟಿನಲ್ಲಿ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮಹತ್ವದ್ದಾಗಿದೆ. ಹಾಗಾಗಿ ಚಿನ್ನಸ್ವಾಮಿ ಅಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಅಬ್ಬರ ಕಾಣುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.ತವರಿನ ಬೆಂಬಲ ಯಾರಿಗೆ?
ಪ್ರಸಕ್ತ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಯಾವೊಬ್ಬ ಕರ್ನಾಟಕದ ಆಟಗಾರನೂ ಆಡುತ್ತಿಲ್ಲ. ಇನ್ನು ರಾಜಸ್ಥಾನ ದಲ್ಲಿಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಂಡದ ಸಲಹೆಗಾರನಾಗಿದ್ದು, ತಂಡದಲ್ಲಿ ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿ ಆಡುತ್ತಿದ್ದಾರೆ. ಇದುವರೆಗೂ ಆರ್ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಅಭೂತಪೂರ್ವ ಬೆಂಬಲ ದೊರಕಿದೆ. ಅಲ್ಲದೆ ಆರ್ಸಿಬಿ ತಂಡ ಈ ಪಂದ್ಯವನ್ನು ತವರಿನ ಅಂಗಣದಲ್ಲಿ ಆಡಿದರಾದರೂ, ಸಂಪೂರ್ಣ ಪ್ರಮಾಣದಲ್ಲಿ ಅಭಿಮಾನಿಗಳ ಬೆಂಬಲ ಪಡೆಯುವುದೇ ಎಂಬುದನ್ನು ಕಾದು ನೋಡಬೇಕು.
ಮಿಂಚುವರೆ ಕರುಣ್, ಬಿನ್ನಿ?
ಈ ಪಂದ್ಯ ಕೇವಲ ಆರ್ಸಿಬಿ ತಂಡಕ್ಕೆ ಮಾತ್ರ ಇದು ತವರಿನ ಪಂದ್ಯವಲ್ಲ. ರಾಜಸ್ಥಾನ ರಾಯಲ್ಸ್ನ ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿ ಕರ್ನಾಟಕದ ಆಟಗಾರರಾಗಿದ್ದು, ದೇಶಿಯ ಪಂದ್ಯಾವಳಿಗಳಲ್ಲಿ ಇದೇ ಪಿಚ್ನಲ್ಲಿ ಆಡಿ ಬೆಳೆದಿದ್ದಾರೆ. ಹಾಗಾಗಿ ಈ ಆಟಗಾರರಿಗೂ ಈ ಪಂದ್ಯ ತವರಿನ ಅಂಗಣವಾಗಿದೆ.
ಇನ್ನು ಕರುಣ್ ನಾಯರ್ ಕಳೆದ ಆವೃತ್ತಿಗಳಲ್ಲಿ ಆರ್ಸಿಬಿ ಪರ ಆಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ವಾತಾವರಣವನ್ನು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಈ ಇಬ್ಬರ ಆಟಗಾರರ ಪ್ರದರ್ಶನ ಅಭಿಮಾನಿಗಳ ಗಮನ ಸೆಳೆಯಲಿದೆ. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪ್ಲಸ್ಪಾಯಿಂಟ್ ಆದರೂ ಅನುಮಾನ ಪಡಬೇಕಾಗಿಲ್ಲ.
ವರುಣನ ಕಣ್ಣಾಮುಚ್ಚಾಲೆ: ಬೆಂಗಳೂರಿನಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯಕ್ಕೆ ಅಡ್ಡಿ ಕರುಣೆ ತೋರಿದ್ದರೂ, ಈ ಪಂದ್ಯಕ್ಕೂ ವರುಣ ಕೃಪೆ ತೋರುವನೇ ಎಂಬುದನ್ನು ಕಾದು ನೋಡಬೇಕು.
ಪ್ರಸ್ತುತ ಪರಿಸ್ಥಿತಿಯಲ್ಲಿ ಮೋಡ ಮುಸುಕಿದ ವಾತಾವರಣವಿದೆ. ಇನ್ನು ಭಾನುವಾರ ಮಳೆ ಬೀಳುವ ನಿರೀಕ್ಷೆ ಇದ್ದು, ಇದು ಪಂದ್ಯಕ್ಕೆ ತೊಂದರೆಯಾಗುವುದೇ ಎಂಬ ಪ್ರಶ್ನೆ ಮೂಡಿದೆ.
ಉತ್ತಮ ಬ್ಯಾಟಿಂಗ್ ಮಾಡಬೇಕು
ಬೆಂಗಳೂರು: ಐಪಿಎಲ್ ಏಳನೇ ಆವೃತ್ತಿಯಲ್ಲಿ ಗೆಲವಿಗಿಂತ ಸೋಲಿನ ಕಹಿಯನ್ನು ಹೆಚ್ಚಾಗಿ ಸವಿದಿರುವ ಆರ್ಸಿಬಿ ತಂಡ, ಮತ್ತೆ ಗೆಲವಿನ ಲಯಕ್ಕೆ ಮರಳಲು ಉತ್ತಮ ಬ್ಯಾಟಿಂಗ್ ಮಾಡಬೇಕಿದೆ ಎಂದು ಆಲ್ರೌಂಡರ್ ಆಲ್ಬಿ ಮಾರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಕೆಲ್, ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ, ಮುಂದಿನ ಆರು ಪಂದ್ಯಗಳಲ್ಲೂ ಗೆಲವು ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ನಾವು ಆರು ಪಂದ್ಯಗಳಲ್ಲಿ ಗೆಲವು ದಾಖಲಿಸಬೇಕಿದೆ. ನಮ್ಮ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸುತ್ತಿದೆ. ನಮ್ಮ ಬ್ಯಾಟ್ಸ್ಮನ್ಗಳು 30, 40ರ ಗಡಿಯಲ್ಲಿ ರನ್ ಗಳಿಸುತ್ತಿದ್ದು, ಅಂತಿಮವರೆಗೂ ಕ್ರೀಸ್ನಲ್ಲಿ ನಿಂತು ಆಡುತ್ತಿಲ್ಲ. ಹಾಗಾಗಿ ಗೆಲವಿನ ಲಯಕ್ಕೆ ಮರಳಲು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಪರಿಸ್ಥಿತಿಯಲ್ಲಿ ನಾವು ಸಕಾರಾತ್ಮಕ ಮನೋಭಾವ ಹೊಂದಿರಬೇಕು. ಅಲ್ಲದೆ ಪ್ರಮುಖ ಆಟಗಾರರ ಸವಾಲನ್ನು ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದರು.