ಫುಟ್ಬಾಲ್ ವಿಶ್ವಕಪ್: ಜರ್ಮನಿಗೆ ವಿರಾಟ್ ಕೊಹ್ಲಿ ಬೆಂಬಲ
ಬೆಂಗಳೂರು: ಫುಟ್ಬಾಲ್ ವಿಶ್ವಕಪ್ ಸಮೀಪಿಸುತ್ತಿದ್ದಂತೆ ವಿಶ್ವದಾದ್ಯಂತ ಅಭಿಮಾನಿಗಳಲ್ಲಿ ಜ್ವರ ಹೆಚ್ಚಿದೆ. ಇನ್ನು ಭಾರತ ಕ್ರಿಕೆಟ್ ತಂಡದ ಪನಾಯಕ ವಿರಾಟ್ ಕೊಹ್ಲಿ ಸಹ ಈ ಪಂದ್ಯಾವಳಿಯನ್ನು ಕಾತುರದಿಂದ ಎದುರು ನೋಡುತ್ತಿದ್ದು, ಜರ್ಮನಿ ತಂಡಕ್ಕೆ ನಾನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಜರ್ಮನಿ ತಂಡ ಈ ಬಾರಿ ವಿಶ್ವದಲ್ಲೇ ಬಲಿಷ್ಠ ತಂಡವಾಗಿದೆ. ಹಾಗಾಗಿ ನಾನು ಈ ಬಾರಿ ಜರ್ಮನಿಗೆ ಬೆಂಬಲ ನೀಡುತ್ತಿದ್ದೇನೆ. ಈ ಪ್ರಶಸ್ತಿಯನ್ನು ಜರ್ಮನಿ ಪಡೆಯುವ ವಿಶ್ವಾಸವಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ಜರ್ಮನಿ ತಂಡದಲ್ಲಿ ಫಿಲಿಪ್ ಲಹ್ಮ್ ನನ್ನ ನೆಚ್ಚಿನ ಆಟಗಾರ. ಅವರ ಕಾರ್ಯ ವೈಖರಿ ಉತ್ತಮವಾಗಿದೆ ಎಂದು ಅಡಿಡಾಸ್‌ನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಕೊಹ್ಲಿ ತಿಳಿಸಿದರು.
ಇನ್ನು ಅಂತಾರಾಷ್ಟ್ರೀಯ ಆಟಗಾರರನ್ನು ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಲಿಯೊನಲ್ ಮೆಸ್ಸಿ ನನ್ನ ನೆಚ್ಚಿನ ಆಟಗಾರರಾಗಿದ್ದಾರೆ. ಅವರೂ ಸಹ ಅಡಿಡಾಸ್ ಜತೆಗೆ ಕೈ ಜೋಡಿಸಿರುವುದರಿಂದ ಅವರನ್ನು ಭೇಟಿ ಮಾಡುವ ಅವಾಕಾಶ ದೊರೆಯಲಿರುವುದು ಸಂತಸದ ಸಂಗತಿಯಾಗಿದೆ. ಇನ್ನು ಭಾರತ ಕ್ರಿಕೆಟ್ ತಂಡದಲ್ಲಿನ ಆಟಗಾರರ ಫುಟ್ಬಾಲ್ ಶೈಲಿ ಬಗ್ಗೆ ಮಾತನಾಡಿದ ಕೊಹ್ಲಿ, ತಂಡದಲ್ಲಿ ಕೆಲವು ಆಟಗಾರರು ಫುಟ್ಬಾಲ್ ಆಡುವಾಗ ಹೊಸ ಪ್ರಯೋಗಗಳಿಗೆ ಮುಂದಾಗುತ್ತಾರೆ ಅದು ಉತ್ತಮ ಮನರಂಜನೆ ನೀಡುತ್ತದೆ. ಅದರಲ್ಲೂ ರವೀಂದ್ರ ಜಡೇಜಾ ಶೈಲಿಯನ್ನು ನೋಡಿದರೆ ಪ್ರತಿಯೊಬ್ಬರು ನಕ್ಕು ನಲಿಯುವಿರಿ. ಆತ ರೊನಾಲ್ಡೊ ರೀತಿಯಲ್ಲಿ ಉತ್ತಮ ಫುಟ್ಬಾಲ್ ಆಟಗಾರ ಎಂದು ಭಾವಿಸುತ್ತಾ ಆಡುತ್ತಿರುತ್ತಾರೆಎಂದು ಕೊಹ್ಲಿ ವಿವರಿಸಿದರು.