ರೈಡರ್ಸ್‌ಗೆ ಪಂಜಾಬ್ ಭೀತಿ
ಕಟಕ್: ಯದ್ವಾ ತದ್ವಾ ಆಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಕಠಿಣ ಸವಾಲು ಎದುರಿಸುತ್ತಿದೆ.
ಇದೇ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಿದ್ದ ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಾಗಿತ್ತು. ಆದಾಗ್ಯೂ, ಆ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಪಂಜಾಬ್ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಪಂಜಾಬ್ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು, ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಕೆಕೆಆರ್ ಬೌಲರ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬ್ಯಾಟ್‌ನೊಂದಿಗೆ ಗುಡುಗುತ್ತಿರುವ ಮ್ಯಾಕ್ಸ್‌ವೆಲ್ ಮತ್ತು ಮಿಲ್ಲರ್ ಅವರೊಂದಿಗೆ ಆರಂಭಿಕ ಮತ್ತು ಹಿರಿಯ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಸಹ ನಿಧಾನವಾಗಿ ಕ್ರೀಸ್‌ಗೆ ಕಚ್ಚಿಕೊಂಡು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಪಂಜಾಬ್ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿರುವುದೇ ಪಂಜಾಬ್ ತಂಡ ಇದುವರೆಗೂ ಜಯದ ಅಲೆಯಲ್ಲಿ ಮುಂದುವರಿಯಲು ಕಾರಣವಾಗಿದೆ. ಆದರೆ, ಇನ್ನೊಂದೆಡೆ ಕೋಲ್ಕತಾ ತಂಡ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲ್ಲಲೇ ಕಷ್ಟಪಟ್ಟಿತ್ತು. ಹೀಗಾಗಿ ಪಂಜಾಬ್ ವಿರುದ್ಧ ಕೋಲ್ಕತಾಕ್ಕೆ ಕಠಿಣ ಸವಾಲು ಎದುರಾಗುವುದರಲ್ಲಿ ಎರಡು ಮಾತಿಲ್ಲ. ಸ್ಥಿರ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಒದ್ದಾಡುತ್ತಿರುವ ನಾಯಕ ಗೌತಮ್ ಗಂಭೀರ್ ತೀವ್ರ ಟೀಕೆಗೊಳಗಾಗುವ ಮೂಲಕ ಇದುವರೆಗೂ ಒಂದು ಬಾರಿ ಮಾತ್ರ ಅರ್ಧ ಶತಕ ದಾಖಲಿಸಿದ್ದಾರೆ.ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆದ್ದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಸಹ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹೀಗಾಗಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಪಂಜಾಬ್ ವಿರುದ್ಧ ತಕ್ಕ ಬ್ಯಾಟಿಂಗ್ ನಡೆಸುವ ಕಾತರದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ ಮಾಂತ್ರಿಕ ಸುನಿಲ್ ನಾರಾಯಣ ಮಿನುಗಿದರೆ, ಪಂಜಾಬ್ ತಂಡವನ್ನು ತಕ್ಕಮಟ್ಟಿಗಾದರೂ ನಿಯಂತ್ರಿಸಬಹುದಾಗಿದೆ. ಇನ್ನು ಪಂಜಾಬ್ ತಂಡ ಫಾರ್ಮ್‌ನಲ್ಲಿರುವ ತನ್ನ ಬ್ಯಾಟಿಂಗ್ ವಿಭಾಗವನ್ನು ತುಂಬು ವಿಶ್ವಾಸದಲ್ಲಿಟ್ಟುಕೊಂಡು ಅಂಗಣಕ್ಕಿಳಿಯುತ್ತಿದೆ. ಅಲ್ಲದೆ, ತಕ್ಕ ಪ್ರದರ್ಶನ ನೀಡುತ್ತಿರುವ ತನ್ನ ಬೌಲಿಂಗ್ ವಿಭಾಗದ ಮೇಲೂ ಹದವಾದ ಒತ್ತಡ ಹೇರಲು ಪಂಜಾಬ್ ಸಿದ್ಧವಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವ ವೇಗಿ ಸಂದೀಪ್ ಶರ್ಮಾ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಎನಿಸಿದ್ದಾರೆ. ಅವರು ಒಟ್ಟು 6 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದಾರೆ. ಅವರೊಂದಿಗೆ, ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಅವರು ಸಹ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ.