ರಾಯಲ್ಸ್ ಓಡಿಸಿದ ಮುಂಬೈ
ಮುಂಬೈ ತಂಡದ ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾದ ರಾಜಸ್ಥಾನ ರಾಯಲ್ಸ್ ತಂಡ ಹೀನಾಯ ಸೋಲನುಭವಿಸಿದೆ.
ಅಹ್ಮದಾಬಾದ್: ಮುಂಬೈ ತಂಡದ ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಏಳನೇ ಆವೃತ್ತಿಯ ಸೋಮವಾರದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 25 ರನ್ಗಳ ಅಂತರದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 3 ವಿಕೆಟ್ಗೆ 178 ರನ್ ದಾಖಲಿಸಿತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 153 ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.
ಮುಂಬೈ ಪ್ಲೇ ಆಫ್ ಸುತ್ತಿನ ಕನಸು ಕೈ ಬಿಟ್ಟಿದೆ. ಆದರೆ, ಪ್ಲೇ ಆಫ್ ಹಂತಕ್ಕೆ ಪ್ರವೇಶಿಸು ಹಾದಿಯಲ್ಲಿರುವ ರಾಜಸ್ಥಾನ ರಾಯಲ್ಸ್ಗೆ ಈ ಸೋಲು ಎಚ್ಚರಿಕೆಯ ಗಂಟೆಯಾಗಿದೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ತಂಡ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲವು ಸಾಧಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಯಶ ಕಂಡ ಆರಂಭಿಕ ಜೋಡಿ: ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭಿಕ ಜೋಡಿಯನ್ನು ಕಂಡುಕೊಳ್ಳಲು ಅತಿ ಹೆಚ್ಚು ಪ್ರಯತ್ನ ನಡೆಸಿದ ತಂಡವಾಗಿತ್ತು. ಸುಮಾರು ಆರು ಬಾರಿ ಆರಂಭಿಕ ಜೋಡಿಯಲ್ಲಿ ಪ್ರಯೋಗ ನಡೆಸಿದ್ದ ಮುಂಬೈ ತಂಡಕ್ಕೆ ಈ ಪಂದ್ಯದಲ್ಲಿ ಯಶ ಸಿಕ್ಕಿದೆ.
ಆರಂಭಿಕರಾಗಿ ಕಣಕ್ಕಿಳಿದ ಲೆಂಡ್ಲ್ ಸಿಮನ್ಸ್ (62 ರನ್, 51 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಮೈಕ್ ಹಸ್ಸಿ (56 ರನ್, 39 ಎಸೆತ, 3 ಬೌಂಡರಿ, 2 ಸಿಕ್ಸರ್) ತಂಡಕ್ಕೆ (120) ಶತಕದ ಜತೆಯಾಟ ನೀಡಿದರು. ನಂತರ ಅಂತಿಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ (40 ರನ್, 19 ಎಸೆತ, 3 ಬೌಂಡರಿ, 4 ಸಿಕ್ಸರ್) ತಂಡದ ಮೊತ್ತವನ್ನು 170ರ ಗಡಿ ದಾಟುವಂತೆ ನೋಡಿಕೊಂಡರು.
ಕರುಣ್ ಹೋರಾಟ ವ್ಯರ್ಥ: ಸವಾಲಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನತ್ತ ಹೆಜ್ಜೆ ಹಾಕಿತು. ಆರಂಭದಿಂದಲೂ ರಾಜಸ್ಥಾನ ಪರ ಹೋರಾಟದ ಇನಿಂಗ್ಸ್ ಆಡಿದ ಕರ್ನಾಟಕದ ಆಟಗಾರ ಕರುಣ್ ನಾಯರ್ (48 ರನ್, 24 ಎಸೆತ, 4 ಬೌಂಡರಿ, 3 ಸಿಕ್ಸರ್) ಆಟ ವ್ಯರ್ಥವಾಯಿತು.
ಕರುಣ್ ಹೊರತಾಗಿ ರಾಯಲ್ಸ್ ತಂಡದ ಅಗ್ರ ಕ್ರಮಾಂಕದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ಬಂದ ಬ್ರಾಡ್ ಹಾಡ್ಜ್ (40 ರನ್, 30 ಎಸೆತ, 3 ಸಿಕ್ಸರ್) ಅಂತಿಮ ಕ್ಷಣದಲ್ಲಿ ಅಬ್ಬರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಂತಿಮವಾಗಿ ರಾಜಸ್ಥಾನ 153 ರನ್ಗಳನ್ನಷ್ಟೇ ಗಳಿಸಿತು.
ಶ್ರೇಯಸ್ ಶೈನ್: ಇನ್ನು ಮುಂಬೈ ಪರ ಈ ಪಂದ್ಯದ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ ಕರ್ನಾಟಕದ ಆಟಗಾರ ಶ್ರೇಯಸ್ ಗೋಪಾಲ್ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಪಂದ್ಯದಲ್ಲಿ 4 ಓವರ್ಗಳಲ್ಲಿ 25 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದ ಶ್ರೇಯಸ್ ಉತ್ತಮ ಬೌಲಿಂಗ್ ಮಾಡಿದರು.
ಶ್ರೇಯಸ್ ಜತೆಗೆ ಉಳಿದ ಬೌಲರ್ಗಳಾದ ಕ್ರಿಶ್ಮರ್ ಸ್ಯಾಂಟೋಕಿ, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್ ತಲಾ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 3 ವಿಕೆಟ್ಗೆ 178
ಮೈಕ್ ಹಸ್ಸಿ ಸಿ ಕೂಪರ್ ಬಿ ಅಂಕಿತ್ 56, ಲೆಂಡ್ಲ್ ಸಿಮನ್ಸ್ ಸಿ ಕೂಪರ್ ಬಿ ಅಂಕಿತ್ 62, ಕೀರನ್ ಪೊಲಾರ್ಡ್ ಅಜೇಯ 14, ರೋಹಿತ್ ಶರ್ಮಾ ರನೌಟ್ (ಫಾಕ್ನರ್) 40, ಇತರೆ: (ಲೆಗ್ ಬೈ 3, ವೈಡ್ 2, ನೊಬಾಲ್ 1) ಒಟ್ಟು 6
ವಿಕೆಟ್ ಪತನ: 1-120, 2-122, 3-178
ಬೌಲಿಂಗ್ ವಿವರ: ಅಂಕಿತ್ ಶರ್ಮಾ 4-0-23-2, ಧವಳ್ ಕುಲಕರ್ಣಿ 4-0-27-0, ಜೇಮ್ಸ್ ಫಾಕ್ನರ್ 4-0-47-0, ಕೆವೊನ್ ಕೂಪರ್ 3-0-27-0, ಸ್ಟುವರ್ಟ್ ಬಿನ್ನಿ 1-0-12-0, ರಜತ್ ಭಾಟಿಯಾ 4-0-39-0,
ರಾಜಸ್ಥಾನ ರಾಯಲ್ಸ್ 20 ಓವರ್ಗಲ್ಲಿ 8 ವಿಕೆಟ್ಗೆ 153ಕರುಣ್ ನಾಯರ್ ಸಿ ಸ್ಯಾಂಟೋಕಿ ಬಿ ಹರ್ಭಜನ್ 48, ಉನ್ಮುಕ್ತ್ ಚಾಂದ್ ಸಿ ಹಸ್ಸಿ ಬಿ ಓಜಾ 2, ಶೇನ್ ವ್ಯಾಟ್ಸನ್ ಸಿ ರಾಯುಡು ಬಿ ಓಜಾ 5, ಸಂಜು ಸ್ಯಾಮ್ಸನ್ ಸಿ ರಾಯುಡು ಬಿ ಸ್ಯಾಂಟೋಕಿ 2, ಕೆವೊನ್ ಕೂಪರ್ ಸಿ ಪೊಲಾರ್ಡ್ ಬಿ ಹರ್ಭಜನ್ 5, ಅಂಕಿತ್ ಶರ್ಮಾ ಸಿ ರಾಯುಡು ಬಿ ಶ್ರೇಯಸ್ 4, ಸ್ಟುವರ್ಟ್ ಬಿನ್ನಿ ಸ್ಟಂಪ್ ತಾರೆ ಬಿ ಶ್ರೇಯಸ್ 2, ಬ್ರಾಡ್ ಹಾಡ್ಜ್ ಸಿ ರೋಹಿತ್ ಬಿ ಸ್ಯಾಂಟೋಕಿ 40, ಫಾಕ್ನರ್ ಅಜೇಯ 31, ರಜತ್ ಭಾಟಿಯಾ ಅಜೇಯ 6 ಇತರೆ: (ಲೆಗ್ ಬೈ 1, ವೈಡ್ 7) ಒಟ್ಟು 8
ವಿಕೆಟ್ ಪತನ: 1-17, 2-38, 3-42, 4-61, 5-66, 6-69, 7-75, 8-144
ಬೌಲಿಂಗ್ ವಿವರ: ಜಸ್ಪ್ರೀತ್ ಬೂಮ್ರಾ 3-0-23-0, ಕ್ರಿಶ್ಮರ್ ಸ್ಯಾಂಟೋಕಿ 4-0-50-2, ಪ್ರಗ್ಯಾನ್ ಓಜಾ 4-0-30-2, ಕೀರನ್ ಪೊಲಾರ್ಡ್ 1-0-11-0, ಹರ್ಭಜನ್ ಸಿಂಗ್ 4-0-13-2, ಶ್ರೇಯಸ್ ಗೋಪಾಲ್ 4-0-25-2,