ಬಾಸ್ಕೆಟ್ಬಾಲ್: ಕರ್ನಾಟಕ ವನಿತೆಯರಿಗೆ ಗೆಲವು
ಕೊಚ್ಚಿ: ಕರ್ನಾಟಕ ತಂಡದ ವನಿತೆಯರು ಕೊಚ್ಚಿಯಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಜೂನಿಯರ್ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿಯರು 88-65 ಅಂಕಗಳಿಂದ ಕಳೆದ ಬಾರಿ ಸೆಮಿಫೈನಲ್ ತಲುಪಿದ್ದ ತಮಿಳುನಾಡು ತಂಡವನ್ನು ಪರಾಭವಗೊಳಿಸಿದರು. ಕರ್ನಾಟಕದ ಪರ ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಂಧವ್ಯ 42 ಅಂಕಗಳನ್ನು ಗಳಿಸುವ ಮೂಲಕ ಕರ್ನಾಟಕದ ಜಯಭೇರಿಗೆ ಕಾರಣರಾದರು.
ಮತ್ತೊಂದು ಪಂದ್ಯದಲ್ಲಿಂದು ಮಹಾರಾಷ್ಟ್ರ ತಂಡ 63-56 ಅಂಕಗಳಿಂದ ಹರ್ಯಾಣ ವಿರುದ್ಧ ಜಯ ಸಾಧಿಸಿತು. ನಾಯಕಿ ಶ್ರುತಿ ಮೆನನ್ (24) ತಂಡದ ಪರ ಗರಿಷ್ಠ ಅಂಕ ಸಂಪಾದಿಸಿದರು.