ಬೋಪಣ್ಣ-ಖುರೇಷಿ ಎರಡನೇ ಸುತ್ತಿಗೆ ಹೆಜ್ಜೆ
ಪ್ಯಾರಿಸ್: ಪ್ರಬಲ ಪೈಪೋಟಿಯ ನಡುವೆಯೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿಯು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಬುಧವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ಜೋಡಿಯೂ, ತಮ್ಮ ಎದುರಾಳಿ ಜೋಡಿಯಾದ ಭಾರತದ ದಿವಿಜ್ ಶರಣ್ ಹಾಗೂ ಆಸ್ಟ್ರೇಲಿಯಾದ ರಮೀಜ್ ಜುನೈದ್ ಜೋಡಿ ವಿರುದ್ಧ ಗೆಲವು ದಾಖಲಿಸಿದೆ.
ಸುದೀರ್ಘ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ರೋಹನ್ ಬೋಪಣ್ಣ ಜೋಡಿಯು 7-5, 6-7(4), 7-5 ಸೆಟ್‌ಗಳ ಅಂತರದಲ್ಲಿ ಜಯದ ನಗೆ ಬೀರಿತು.
ಆರಂಭದಿಂದಲೇ ಉಭಯ ಜೋಡಿಗಳು ಜಿದ್ದಾಜಿದ್ದಿನ ಹೋರಾಟ ನಡೆಸುವ ಮೂಲಕ ಪಂದ್ಯವನ್ನು ಹೆಚ್ಚು ರೋಚಕವಾಗುವಂತೆ ಮಾಡಿದರು. ಆರಂಭಿಕ ಸೆಟ್‌ನಲ್ಲಿ 7-5 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದ ಬೋಪಣ್ಣ ಜೋಡಿ, ಎರಡನೇ ಸೆಟ್‌ನಲ್ಲಿ ಎಡವಿತು. ಈ ವೇಳೆ ಹೋರಾಟದ ಪ್ರದರ್ಶನ ನೀಡಿದ ದಿವಿಜ್ ಶರಣ್ ಜೋಡಿ 6-7(4) ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನು ಮೂರನೇ ಸೆಟ್‌ನಲ್ಲಿ ಮತ್ತೆ ನಿಯಂತ್ರಣ ಸಾಧಿಸಿದ ಇಂಡೊ-ಪಾಕ್ ಜೋಡಿ 7-5ರ ಮುನ್ನಡೆಯೊಂದಿಗೆ ಪಂದ್ಯವನ್ನು ಸಂಪೂರ್ಣ ವಶಪಡಿಸಿಕೊಂಡು, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ರಾಡೆಕ್, ಜೋಕೊವಿಚ್ ಗೆಲವು: ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ತಮ್ಮ ಎದುರಾಳಿ ರಷ್ಯಾದ ಮಿಖೈಲ್ ಯುಝ್ನಿ ವಿರುದ್ಧ ಗೆಲವು ದಾಖಲಿಸಿದ್ದಾರೆ.
ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ ಸ್ಟೆಪಾನೆಕ್ 6-0, 6-3, 3-6, 6-4 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದರು.
ಮತ್ತೊಂದು ಪಂದ್ಯದಲ್ಲಿ ನೊವಾಕ್ ಜೋಕೊವಿಚ್ ತಮ್ಮ ಪ್ರತಿಸ್ಪರ್ಧಿ ಚಾರ್ಡಿ ವಿರುದ್ಧ 6-1, 6-4, 6-2 ನೇರ ಸೆಟ್‌ಗಳ ಅಂತರದಲ್ಲಿ ಮೇಲುಗೈ ಸಾಧಿಸಿ, ಮುಂದಿನ ಹಂತಕ್ಕೆ ಪ್ರವೇಶಿಸಿದರು. ಇನ್ನು ರೋಜರ್ ಫೆಡರರ್ 6-3, 6-4, 6-4 ಸೆಟ್‌ಗಳ ಅಂತರದಲ್ಲಿ ತಮ್ಮ ಎದುರಾಳಿ ಡೈಗೊ ಸೆಬಾಸ್ಟಿಯನ್ ವಿರುದ್ಧ ಗೆಲವು ದಾಖಲಿಸಿದರು.
ವಿಲಿಯಮ್ಸ್ ಸೋದರಿಯರಿಗೆ ಶಾಕ್: ಅಮೆರಿಕಾದ ಮಹಿಳಾ ಟೆನಿಸ್ ತಾರೆಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಸ್ಪೇನ್‌ನ ಗಾರ್ಬಿನೆ ಮುಗುರ್ಜಾ ಅವರ ಆಕ್ರಮಣಕಾರಿ ಆಟಕ್ಕೆ ಪ್ರತ್ಯುತ್ತರ ನೀಡುವಲ್ಲಿ ವಿಫಲರಾದ ಸೆರೆನಾ ವಿಲಿಯಮ್ಸ್ 2-6, 2-6 ನೇರ ಸೆಟ್‌ಗಳ ಹೀನಾಯ ಸೋಲನುಭವಿಸಿದರು.
ಪಂದ್ಯದ ಯಾವುದೇ ಹಂತದಲ್ಲಿ ನಿಯಂತ್ರಣ ಕಂಡುಕೊಳ್ಳದ ಸೆರೆನಾ ವಿಲಿಯಮ್ಸ್, ಆಘಾತಕಾರಿ ಸೋಲಿನಿಂದಾಗಿ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ.
ಇನ್ನು ಸೆರೆನಾ ಸೋದರಿ ವೀನಸ್ ಸಹ ತಮ್ಮ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ. ಸ್ಲೊವಾಕಿಯಾದ ಆಟಗಾರ್ತಿ ಅನ್ನಾ ಸ್ಕಿಮಿಡ್ಲೊವಾ ವಿರುದ್ಧ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲರಾದ ವೀನಸ್, 6-2, 3-6, 4-6 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.