ಅಭ್ಯಾಸಕ್ಕೂ ಜೇಬಿಂದನೇ ಹಣ ಪಾವತಿ
ನವದೆಹಲಿ: ರಣಜಿ ಋತುವಿನಲ್ಲಿ ಹಾಗೂ ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಯುವ ಆಟಗಾರ ಕೇದಾರ್ ಜಾಧವ್, ತಮ್ಮ ರಾಜ್ಯದಲ್ಲೇ ಸರಿಯಾದ ನೆರವು ಪಡೆಯದೇ ನೆಟ್ಸ್ ಅಭ್ಯಾಸಕ್ಕೂ ತಮ್ಮ ಜೇಬಿನಿಂದಲೇ ಹಣ ಪಾವತಿಸುತ್ತಿದ್ದಾರೆ.
ಕ್ರಿಕೆಟ್ ಅನ್ನು ಧರ್ಮವಾಗಿ ಪ್ರೀತಿಸುವ ಭಾರತದಲ್ಲಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಆದರೆ ಕೇದಾರ್ ಜಾಧವ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರೂ ತಮ್ಮ ತವರು ರಾಜ್ಯದಲ್ಲಿ ಸರಿಯಾದ ಬೆಂಬಲ ಸಿಗದೆ ಪರದಾಡುತ್ತಿರುವುದು ಬೇಸರ ಮೂಡಿಸುವ ಸಂಗತಿಯಾಗಿದೆ.
ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಷ್ಟು ಹಣ ಖರ್ಚು ಮಾಡಿ ಆಟಗಾರರಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸಿದೆ ಎಂದರೂ, ಈ ರೀತಿಯಾದ ಪ್ರಸಂಗಗಳು ತಲೆ ತಗ್ಗಿಸುವಂತೆ ಮಾಡುತ್ತವೆ. ಬಾಂಗ್ಲಾ ಪ್ರವಾಸದ ತಯಾರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಧವ್, ನಾನು ತಿಂಗಳಿಗೆ ರು. 18 ಸಾವಿರ ಶುಲ್ಕವನ್ನು ಪಾವತಿ ಮಾಡುವ ಮೂಲಕ ಕ್ರಿಕೆಟ್ ಅಕಾಡೆಮಿಯಲ್ಲಿನ ಉತ್ತಮ ಪಿಚ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಅದೆಷ್ಟು ಕ್ರಿಕೆಟರ್‌ಗಳು ಭಾರತ ತಂಡಕ್ಕೆ ಆಯ್ಕೆಯಾದ ನಂತರವೂ ತಮ್ಮ ರಾಜ್ಯದಲ್ಲಿ ಈ ರೀತಿಯ ಸತ್ಕಾರ ಪಡೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ನಾನು ಕಳೆದ 14 ವರ್ಷಗಳಿಂದ ಡೆಕ್ಕನ್ ಜಿಮ್ಕಾನ ಕ್ಲಬ್‌ನಿಂದ ಪ್ರತಿನಿಧಿಸುತ್ತಿದ್ದರೂ ಸಹ, ಅವರು ಬಾಂಗ್ಲಾದೇಶ ಪ್ರವಾಸಕ್ಕೆ ಸರಿಯಾದ ರೀತಿಯಲ್ಲಿ ಅಭ್ಯಾಸ ನಡೆಸಲು ಪಿಚ್ ಒದಗಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿದರು. ನಾನು ಭಾರತ ಎ ತಂಡಕ್ಕೆ ಹಾಗೂ ಐಪಿಎಲ್‌ಗೆ ಆರಂಭವಾದಾಗಿನಿಂದ ನನ್ನ ಪ್ರದರ್ಶನ ಅವರಿಗೆ ತೃಪ್ತಿ ತಂದಿಲ್ಲ ಎಂದೆನಿಸುತ್ತದೆ ಎಂದು ವಿಷಾದದಿಂದ ನುಡಿದರು.