ಕ್ವಾಲಿಫಾಯರ್ನಲ್ಲಿ ಫ್ಲೈ...ಫ್ರೈ ಯಾರು?
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಎರಡನೇ ಕ್ವಾಲಿಫಾಯರ್ ಪಂದ್ಯದಲ್ಲಿ ಇದೇ ಫಲಿತಾಂಶ ಪಡೆದು..
ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಅದ್ಧೂರಿ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಎರಡನೇ ಕ್ವಾಲಿಫಾಯರ್ ಪಂದ್ಯದಲ್ಲಿ ಇದೇ ಫಲಿತಾಂಶ ಪಡೆದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಕನಸು ಕಟ್ಟಿಕೊಂಡಿದೆ.
ಮತ್ತೊಂದೆಡೆ ಮೊದಲ ಕ್ವಾಲಿಫಾಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸೋಲುವ ಮೂಲಕನೇರವಾಗಿ ಫೈನಲ್ ತಲುಪುವ ಹಾದಿಯಿಂದ ಮುಗ್ಗರಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್, ಈಗ ತನ್ನ ಮುಂದಿರುವ ಕೊನೆಯ ಅವಕಾಶದಲ್ಲಿ ಈ ಆಸೆ ಈಡೇರಿಸಿಕೊಳ್ಳಲು ಪಣತೊಟ್ಟಿದೆ.
ಹಾಗಾಗಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫಾಯರ್ ಪಂದ್ಯ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತು ತಲುಪುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ದಕ್ಕಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದೆ. ಲೀಗ್ ಹಂತದಲ್ಲಿ ಕಿಂಗ್ಸ್ ಪಂಜಾಬ್ ಆಡಿದ 14 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಸೋತು 11ರಲ್ಲಿ ಗೆಲವು ದಾಖಲಿಸುವ ಮೂಲಕ ಎಂಟು ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದ ಗೌರವ ಹೊಂದಿತ್ತು. ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳನ್ನಾಡಿ 5ರಲ್ಲಿ ಸೋಲು ಮತ್ತು 9ರಲ್ಲಿ ಗೆಲವಿನ ಫಲಿತಾಂಶದೊಂದಿಗೆ ಮೂರನೇ ಸ್ಥಾನ ಪಡೆದು ಪ್ಲೇಆಫ್ಗೆ ಪ್ರವೇಶಿಸಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ದೊಡ್ಡ ಶಕ್ತಿ ಎಂದರೆ ಬ್ಯಾಟಿಂಗ್ ವಿಭಾಗ. ಅದರಲ್ಲೂ ಗ್ಲೆನ್ ಮ್ಯಾಕ್ಸ್ವೆಲ್ ಎಂದರೆ ಯಾವುದೇ ಬೌಲರ್ಗೂ ನಡುಕ. ಆದರೆ, ಕೆಲವು ಪಂದ್ಯಗಳಲ್ಲಿ ಆತ ವೈಫಲ್ಯ ಅನುಭವಿಸಿದ್ದು, ಪಂಜಾಬ್ಗೆ ಹಿನ್ನಡೆ ತಂದುಕೊಟ್ಟಿತು. ಕೆಕೆಆರ್ ವಿರುದ್ಧದ ಕಳೆದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಮಿಂಚದಿರುವುದು ತಂಡಕ್ಕೆ ಮುಳುವಾಯಿತು.
ಈಗ ಚೆನ್ನೈ ವಿರುದ್ಧದ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಮ್ಯಾಕ್ಸ್ವೆಲ್ ಹೊರತಾಗಿ ಡೇವಿಡ್ ಮಿಲ್ಲರ್, ವೀರೇಂದ್ರ ಸೆಹವಾಗ್, ನಾಯಕ ಜಾರ್ಜ್ ಬೇಯ್ಲಿ, ಮನನ್ ವೋಹ್ರಾ ಮತ್ತು ವೃದ್ಧಿಮಾನ್ ಸಹ ತಮ್ಮ ನೈಜ ಆಟದೊಂದಿಗೆ ಮಿಂಚಿದಲ್ಲಿ ಪಂಜಾಬ್ಗೆ ಗೆಲವು ಕಷ್ಟವಾಗಲಿಕ್ಕಿಲ್ಲ.
ಆದರೆ, ಉತ್ತಮ ಆಲ್ರೌಂಡರ್ಗಳಿಂದ ಕೂಡಿರುವ, ಸಮರ್ಥ ಬ್ಯಾಟಿಂಗ್ ಪಡೆ ಹೊಂದಿರುವ ಚೆನ್ನೈ ಪಡೆಯನ್ನು ಬಂಧಿಸಲು ಪಂಜಾಬ್ ಬೌಲರ್ಗಳಿಗೆ ಅಗ್ನಿಪರೀಕ್ಷೆಯೇ ಕಾದಿದೆ. ಹಾಗಾಗಿ, ಪಂಜಾಬ್ ದಾಳಿಕಾರರಾದ ಪರ್ವಿಂದರ್ ಅವಾನ, ಮಿಚೆಲ್ ಜಾನ್ಸನ್, ಅಕ್ಷರ್ ಪಟೇಲ್, ಕರಣವೀರ್ ಸಿಂಗ್, ರಿಶಿ ಧವನ್ ಗುಣಮಟ್ಟದ ಪ್ರದರ್ಶನ ನೀಡುವುದು ಅಗತ್ಯವಾಗಿದೆ.
ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿಯ ಜಾಣ್ಮೆಯ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಕೂಡ ಹೆಚ್ಚು ಆತ್ಮವಿಶ್ವಾಸದಿಂದ ಪುಟಿಯುತ್ತಿದೆ. ತಂಡದ ಆಟಗಾರರೆಲ್ಲ ಉತ್ತಮ ಲಯದಲ್ಲಿರುವುದೇ ಈವರೆಗಿನ ಅದರ ಯಶಸ್ಸಿನ ಗುಟ್ಟು. ಡ್ವೈನ್ ಸ್ಮಿತ್, ಬ್ರೆಂಡನ್ ಮೆಕಲಂ, ಸುರೇಶ್ ರೈನಾ, ಫಫ್ ಡು ಪ್ಲೆಸಿಸ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಅಶಿಶ್ ನೆಹ್ರಾ, ಮೋಹಿತ್ ಶರ್ಮಾ, ಈಶ್ವರ್ ಪಾಂಡೆ, ಸಾಮುಯೆಲ್ ಬದ್ರಿ, ರವಿಚಂದ್ರನ್ ಅಶ್ವಿನ್, ಬೆನ್ ಹಿಲ್ಫೆನ್ಹಾಸ್ ಅವರಂತಹ ಉತ್ತಮ ಆಯ್ಕೆಗಳಿವೆ. ಒಂದು ರೀತಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಹೆಚ್ಚು ಸಮತೋಲನದಿಂದ ಕೂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಲು ಕಿಂಗ್ಸ್ ಇಲೆವೆನ್ ಪಂಜಾಬ್ ಬಾರಿ ಶ್ರಮವಹಿಸಬೇಕಾಗುತ್ತದೆ.
ಇನ್ನು ಈ ಎರಡು ದೈತ್ಯ ತಂಡಗಳ ರೋಚಕ ಕದನ ವೀಕ್ಷಿಸಲು ಕ್ರೀಡಾಂಗಣಕ್ಕೆ ಜನಸಾಗರವೇ ಹರಿದುಬರುವ ನಿರೀಕ್ಷೆಯಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆ