ಬ್ಯಾಡ್ಮಿಂಟನ್ ರ್ಯಾಂಕಿಂಗ್: 13ನೇ ಕ್ರಮಾಂಕದಲ್ಲಿ ಶ್ರೀಕಾಂತ್
ನವದೆಹಲಿ: ಭಾರತದ ಉದಯೋನ್ಮುಖ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರು ನೂತನ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನ ಪುರುಷರ ಸಿಂಗಲ್ಸ್ನಲ್ಲಿ ಐದು ಸ್ಥಾನ ಮೇಲೇರುವುದರೊಂದಿಗೆ ಜೀವನಶ್ರೇಷ್ಠ 13ನೇ ಕ್ರಮಾಂಕ ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಪಿ.ವಿ. ಸಿಂಧು ಮತ್ತೆ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧು ಒಂದು ಸ್ಥಾನ ಏರಿಕೆ ಕಾಣುವ ಮೂಲಕ 10ನೇ ಸ್ಥಾನ ಪಡೆದಿದ್ದಾರೆ.
ಇನ್ನು ಭಾರತದ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹವಾಲ್ 8ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲೀ ಕ್ಸೆರುಯಿ ಮಹಿಳೆಯರ ಸಿಂಗಲ್ಸ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಉಳಿದಂತೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ತಮ್ಮ 21ನೇ ಕ್ರಮಾಂಕ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಡಬಲ್ಸ್ ವಿಭಾಗದಲ್ಲಿ ಮಾತ್ರ ಯಾವುದೇ ಭಾರತೀಯ ಆಟಗಾರ ಅಗ್ರ 25ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.