ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಬೆಲ್ಜಿಯಂ ಸವಾಲು

Srinivasa Murthy VN
Updated On : 31 May 2014, 12:55 pm

ದಿ ಹೇಗ್ (ನೆದರ್‌ಲೆಂಡ್): ಗಾಯಾಳುಗಳ ತೊಂದರೆಯ ಮಧ್ಯೆಯೇ ಭಾರತದ ಆಟಗಾರರು ಶನಿವಾರದಿಂದ ಇಲ್ಲಿ ಆರಂಭವಾಗಲಿರುವ ವಿಶ್ವಕಪ್ ಹಾಕಿ ಚಾಂಪಿಯನ್‌ಶಿಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲು ಸಿದ್ಧರಾಗಿದ್ದಾರೆ.
ಕ್ಯುಸೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸರ್ದಾರ್ ಸಿಂಗ್ ನಾಯಕತ್ವದ ಭಾರತ ತಂಡ ಪ್ರಬಲ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಭಾರತ ತಂಡ ಕೌಲಾಲಂಪುರದಲ್ಲಿ ನಡೆದ 1975ರ ವಿಶ್ವಕಪ್ ಗೆದ್ದುಕೊಂಡ ನಂತರ ಈವರೆಗೂ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕನಿಷ್ಠ ಸೆಮಿಫೈನಲ್‌ಗೂ ಅರ್ಹತೆ ಪಡೆದುಕೊಂಡಿಲ್ಲ. ಆದರೆ, ಈ ಬಾರಿ ಸುಮಾರು ನಾಲ್ಕು ದಶಕಗಳ ಮತ್ತೆ ಜಾಗತಿಕ ಹಾಕಿಯಲ್ಲಿ ತನ್ನ ಪಾರುಪತ್ಯ ಮೆರೆಯುವ ವಿಶ್ವಾಸದೊಂದಿಗೆ ಹೋರಾಟಕ್ಕೆ ಅಣಿಯಾಗುತ್ತಿದೆ. ಆದರೆ, ಮೊದಲ ಪಂದ್ಯದಲ್ಲಿ ಎದುರಾಗುತ್ತಿರುವ ಯೂರೋಪಿಯನ್ ಕಪ್ ರನ್ನರ್ಸ್ ಅಪ್ ಬೆಲ್ಜಿಯಂ ಕಠಿಣ ಎದುರಾಳಿಯಾಗಿದೆ. 2012ರ ಒಲಿಂಪಿಕ್ಸ್ ಕೂಟದಲ್ಲಿ ಬ್ರೆಜಿಲ್ ಆಟಗಾರರು ಭಾರತವನ್ನು ಸೋಲಿಸಿದ್ದರು. ಕಳೆದ ಬಾರಿ ಉಭಯ ಪಡೆಗಳು ಮುಖಾಮುಖಿಯಾದಾಗ ಬೆಲ್ಜಿಯಂ ತಂಡ, ವಿಶ್ವ ಲೀಗ್ ಫೈನಲ್ಸ್ ಪ್ಲೇಆಫ್‌ನಲ್ಲಿ ಐದನೇ ಸ್ಥಾನ ಪಡೆಯುವ ಭಾರತದ ಕನಸನ್ನು ನುಚ್ಚುನೂರು ಮಾಡಿತ್ತು. ಭಾರತ ತಂಡದಲ್ಲಿ ಇಬ್ಬರು ಪ್ರಮುಖ ಆಟಗಾರರಾದ ರಮಣದೀಪ್ ಸಿಂಗ್ ಮತ್ತು ನಿಕಿನ್ ತಿಮ್ಮಯ್ಯ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವುದು ಭಾರಿ ನಷ್ಟವೆನಿಸಿದೆ. ಆದರೂ ಸಹ ಇವರ ಬದಲಿಗೆ ಸ್ಥಾನ ಪಡೆದಿರುವ ಲಲಿತ್ ಉಪಾಧ್ಯಾಯ ಮತ್ತು ಯುವರಾಜ್ ವಾಲ್ಮೀಕಿ ಮೇಲೂ ನಂಬಿಕೆ ಇಡಬಹುದಾಗಿದೆ. ಕಳೆದ ಬಾರಿ ತವರು ಹೊಸದೆಹಲಿಯಲ್ಲಿ ಆಡಲಾಗಿದ್ದ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಟಗಾರರ ಪೈಕಿ ಕೇವಲ ನಾಲ್ವರು ಮಾತ್ರ ಈ ಬಾರಿ ತಂಡದಲ್ಲಿದ್ದಾರೆ.
ಮತ್ತೊಂದೆಡೆ ಬೆಲ್ಜಿಯಂ ತಂಡದಲ್ಲಿ ಹೆಚ್ಚು ಅನುಭವಿ ಆಟಗಾರರಿರುವುದು ಅದರ ಬಲ ಹೆಚ್ಚಿಸಿದೆ. ಈ ತಂಡದಲ್ಲಿ 10 ಮಂದಿ ಆಟಗಾರರು 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವವುಳ್ಳವರಾಗಿರುವುದರಿಂದ ಭಾರತದ ಮುಂದೆ ಅತ್ಯಂತ ಕಠಿಣ ಸವಾಲು ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜರ್ಮನಿ ಮತ್ತು ಎರಡು ಬಾರಿ ವಿಶ್ವಕಪ್ ಜಯಿಸಿರುವ ಹಾಗೂ ಆತಿಥೇಯ ತಂಡವಾಗಿರುವ ಹಾಲೆಂಡ್ 'ಬಿ' ಗುಂಪಿನಲ್ಲಿ ಸೆಣಸಲಿವೆ.
ಮಹಿಳಾ ವಿಶ್ವಕಪ್: ಈ ಮಧ್ಯೆ ಮಹಿಳೆಯರ ವಿಶ್ವಕಪ್ ಕೂಡ ಇದರ ಜೊತೆಯಲ್ಲಿಯೇ ಸಾಗಲಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಆರು ಬಾರಿ ಪ್ರಶಸ್ತಿ ಜಯಿಸಿರುವ ಹಾಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.
ಮಹಿಳೆಯರ ವಿಭಾಗದಲ್ಲಿ 'ಎ'ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಬೆಲ್ಜಿಯಂ, ನ್ಯೂಜಿಲೆಂಡ್, ಜಪಾನ್, ಹಾಲೆಂಡ್ ಹಾಗೂ 'ಬಿ' ಗುಂಪಿನಲ್ಲಿ ಜರ್ಮನಿ, ಇಂಗ್ಲೆಂಡ್, ಅಮೆರಿಕ, ಚೀನಾ, ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ. ಆದರೆ, ಈ ವಿಭಾಗದಲ್ಲಿ ಭಾರತದ ವನಿತೆಯರು ಅರ್ಹತೆ ಪಡೆದುಕೊಂಡಿಲ್ಲ.

ಕ್ರಿಕೆಟಿಗರ ಶುಭ ಹಾರೈಕೆ
ನವದೆಹಲಿ:
ಹಾಲೆಂಡ್‌ನಲ್ಲಿ ಶನಿವಾರದಿಂದ ಆರಂಭವಾಗಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಆಟಗಾರರಿಗೆ ಕ್ರಿಕೆಟಿಗರುಗಳು ಶುಭ ಹಾರೈಸಿದ್ದಾರೆ. ಭಾರತ ತಂಡ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿ. ಹಾಕಿ ಇಂಡಿಯಾಗೆ ಶುಭವಾಗಲಿ ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹಾಗೂ ಆಫ್ ಸ್ಪಿನ್ನರ್ ಹರ್‌ಭಜನ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ.

ಗುಂಪುಗಳ ವಿಂಗಡಣೆ
'ಎ' ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್,ಬೆಲ್ಜಿಯಂ, ಭಾರತ, ಸ್ಪೇನ್, ಮಲೇಷಿಯಾ
'ಬಿ' ಗುಂಪು: ಜರ್ಮನಿ, ಹಾಲೆಂಡ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ

ಭಾರತದ ಪಂದ್ಯಗಳು
ಮೇ 31    ಬೆಲ್ಜಿಯಂ
ಜೂನ್ 2    ಇಂಗ್ಲೆಂಡ್
ಜೂನ್ 5    ಸ್ಪೇನ್
ಜೂನ್ 7    ಮಲೇಷಿಯಾ
ಜೂನ್ 9    ಆಸ್ಟ್ರೇಲಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement