ಫುಟ್ಬಾಲ್: ಜಯಿಸಿದ ಸೌತ್ ಯುನೈಟೆಡ್
ಬೆಂಗಳೂರು: ಸೌತ್ ಯುನೈಟೆಡ್ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಿರಾಯಾಸ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೌತ್ ಯುನೈಟೆಡ್ ತಂಡ 3-0 ಗೋಲುಗಳಿಂದ ಸಿಐಎಲ್ ತಂಡಕ್ಕೆ ಸೋಲುಣಿಸಿತು.
ವಿಜೇತ ಸೌತ್ ಯುನೈಟೆಡ್ ಪರ ಸುಬಾಷ್ 72ನೇ, 75ನೇ ನಿಮಿಷ ಮತ್ತು ಸೇಂಥಿಲ್ 53ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಈ ಮಧ್ಯೆ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಪೋಸ್ಟಲ್ ತಂಡ 3-0 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್ ತಂಡದ ವಿರುದ್ಧ ಜಯಭೇರಿ ಬಾರಿಸಿತು.
ಶಲೆನ್‌ಮಾಂಗ್ 8ನೇ, 68ನೇ ನಮಿಷ ಮತ್ತು ವೆಂಕಟೇಶ್ 56ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಪೋಸ್ಟಲ್ ತಂಡದ ಗೆಲವಿನಲ್ಲಿ ಮಿಂಚಿದರು.
ಭಾನುವಾರ ನಡೆಯಲಿರುವ 'ಎ' ಡಿವಿಜನ್ ಲೀಗ್ ಪಂದ್ಯಗಳಲ್ಲಿ ತಿಲಕ್ ಮೆಮೋರಿಯಲ್ ಮತ್ತು ಬಿಯುಎಫ್‌ಸಿ, ಸ್ಟುಡೆಂಟ್ ಯೂನಿಯನ್ ಮತ್ತು ಎಜಿಒಆರ್‌ಸಿ ಹಾಗೂ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಎಚ್‌ಎಎಲ್ ಮತ್ತು ಎಂಇಜಿ ತಂಡಗಳು ಮುಖಾಮುಖಿಯಾಗಲಿವೆ.