ಫುಟ್ಬಾಲ್ ವಿಶ್ವಕಪ್ಗೆ ಡೆಂಘೀ ಕಾಟ
ರಿಯೋ ಡಿ ಜನೈರೋ: ಇಡೀ ವಿಶ್ವದ ಕ್ರೀಡಾಸಕ್ತರು ಫುಟ್ಬಾಲ್ ವಿಶ್ವಕಪ್ ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ನಡೆಯುವ ನಗರಕ್ಕೆ ಡೆಂಘೀ ಜ್ವರ ದಾಳಿ ಇಟ್ಟಿದೆ.
ಹೀಗಾಗಿ, ನಗರಕ್ಕೆ ಪೊರ್ಚುಗಲ್ ಮತ್ತು ನೈಜಿರಿಯಾ ತಂಡಗಳು ಆಗಮಿಸುವ ಮುನ್ನವೇ, ಜ್ವರ ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಕಾರಣವಾಗುವ ಸೊಳ್ಳೆಗಳನ್ನು ನಾಶ ಮಾಡಲು ಪಂದ್ಯಾವಳಿ ನಡೆಯುವ ಸ್ಥಳದಲ್ಲಿ ಕಾರ್ಯರ್ತರು ಮಗ್ನರಾಗಿದ್ದಾರೆ.
ಸುಮಾರು 32,384 ಜನರು ಈಗಾಗಲೇ ಫುಟ್ಬಾಲ್ ವಿಶ್ವಕಪ್ ನಡೆಯುವ ಸ್ಥಳದಲ್ಲಿ ಡೆಂಘೀ ಜ್ವರಪೀಡಿತರಾಗಿದ್ದಾರೆ. ಅಲ್ಲದೆ, ಜ್ವರದಿಂದ ಕನಿಷ್ಟ ಮೂರು ಜನರು ಅಸುನೀಗಿದ್ದಾರೆ ಎನ್ನಲಾಗಿದೆ.
'ಸೋಂಕು ಈಗ ತೀವ್ರವಾಗಿ ಹರಡುತ್ತಿದೆ. 2007ರಲ್ಲಿ ದಾಖಲಾಗಿದ್ದ 11,500 ಪ್ರಕರಣಗಳಿಗಿಂತ ಅತಿ ಹೆಚ್ಚಿನ ಪ್ರಮಾಣದ ಪ್ರಕರಣಗಳು ಈಗ ದಾಖಲಾಗಿವೆ' ಎಂದು ಡೆಂಘೀ ನಿಯಂತ್ರಣ ಆಂದೋಲನದಲ್ಲಿ ಭಾಗಿಯಾಗಿರುವ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಜ್ವರಪೀಡಿತ ಮನುಷ್ಯನಿಗೆ ತೀವ್ರ ಮೈಕೈ ನೋವು, ತಲೆ ಸುತ್ತುವುದು, ಮಾಂಸಖಾಂಡ ಮತ್ತು ಸಂದಿವಾತ, ವಾಂತಿ ಹಾಗೂ ತುರುಕೆಯಂತಹ ಲಕ್ಷಣಗಳು ಕಂಡುಬರುತ್ತವೆ. ಡೆಂಘೀ ಜ್ವರಕ್ಕೆ ಸೂಕ್ತ ಔಷಧವಿಲ್ಲ. ಹಾಗಾಗಿ ಮುಂಜಾಗ್ರತೆಯೇ ವಿಶೇಷ ಔಷಧ ಎನ್ನಲಾಗಿದೆ.
ಪೆರು ಮೇಲೆ ಆಂಗ್ಲರಪಾರಮ್ಯ: ವಿಶ್ವಕಪ್ಗೂ ಮುನ್ನ ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ. ವೆಂಬ್ಲೀ ಕ್ರೀಡಾಂಗಣದಲ್ಲಿ ಪೆರು ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಮುನ್ನಡೆ ಆಟಗಾರರು ದಾಖಲಿಸಿದ ಗೋಲುಗಳ ನೆರವಿನೊಂದಿಗೆ ಇಂಗ್ಲೆಂಡ್ ತಂಡ ವಿಜಯದ ದಡ ಸೇರಿತು.
ಸ್ಪೇನ್ ವಿರುದ್ಧ ಬಳಲಿದ ಬೊಲಿವಿಯಾ: ಮಹತ್ವದ ಪಂದ್ಯಾವಳಿಗೂ ಮುನ್ನ ನಡೆದ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಬೊಲಿವಿಯಾ ವಿರುದ್ಧ ಸ್ಪೇನ್ ತಂಡ 2-0 ಗೋಲುಗಳ ಅಂತದಿಂದ ಜಯ ಸಾಧಿಸಿತು.
ಫೆರ್ನಾಂಡೋ ಟೊರೆಸ್ ಮತ್ತು ಆ್ಯಂಡ್ರೆಸ್ ಇನಿಯಸ್ತಾ ಅವರು ಸ್ಪೇನ್ ತಂಡದ ಪರ ಗೋಲು ದಾಖಲಿಸಿದರು. ಹೀಗಾಗಿ ಎರಡು ಪಂದ್ಯಗಳ ಸರಣಿಯಲ್ಲಿ ಈಗ ಸ್ಪೇನ್ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.