ಫೆರರ್, ಎಲೆನಾ ಮುನ್ನಡೆ, ಅನಾಗೆ ಸೋಲು
ಪ್ಯಾರಿಸ್: ಸ್ಪೇನ್ ಆಟಗಾರ ಡೇವಿಡ್ ಫೆರರ್ ಹಾಗೂ ಎಲೆನಾ ಯಾಂಕೊವಿಚ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಜಯ ಮುಂದುವರಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಡೇವಿಡ್ ಫೆರರ್ ತಮ್ಮ ಎದುರಾಳಿ ಇಟಲಿಯ ಆ್ಯಡ್ರೆಸ್ಸಾ ಸೆಪ್ಪಿ ವಿರುದ್ಧ 6-2, 7-6 (7-2), 6-3 ನೇರ ಸೆಟ್ಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 23ನೇ ರ್ಯಾಕಿಂಗ್ ಆಟಗಾರ್ತಿ ಜೆಕ್ ಗಣರಾಜ್ಯದ ಲೂಸಿಯಾ ಸ್ಯಾಪರೋವಾ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆರ್ಬಿಯಾದ ಅನಾ ಇವಾನೊವಿಚ್ ವಿರುದ್ಧ 6-3, 6-3 ನೇರ ಸೆಟ್ಗಳ ಗೆಲವು ದಾಖಲಿಸಿ ಅಚ್ಚರಿ ಮೂಡಿಸಿದರು.
ಮತ್ತೊಂದು ಪಂದ್ಯದಲ್ಲಿ ಸರ್ಬಿಯಾದ ಎಲೆನಾ ಯಾಂಕೊವಿಚ್ ತಮ್ಮ ಗೆಲವಿನ ಯಾತ್ರೆ ಮುಂದುವರಿಸಿದ್ದು, ರೊಮೆನಿಯಾದ ಸೊರಾನಾ ಕ್ರಿಸ್ಟಿ ವಿರುದ್ಧ 6-1, 6-2 ನೇರ ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ರಷ್ಯಾದ 27ನೇ ರ್ಯಾಕಿಂಗ್ ಆಟಗಾರ್ತಿ ಸ್ವೆಟ್ಲಾನ ಕುಜ್ನೆಟ್ಸೊವಾ, 5ನೇ ರ್ಯಾಂಕಿಂಗ್ನ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಅವರನ್ನು 6-7 (3-7), 6-1, 9-7 ಸೆಟ್ಗಳ ಅಂತರದಲ್ಲಿ ಮಣಿಸಿ ಗಮನ ಸೆಳೆದರು.
ಇನ್ನು 10ನೇ ರ್ಯಾಂಕಿಂಗ್ನ ಇಟಲಿಯ ಆಟಗಾರ್ತಿ ಸಾರಾ ಎರ್ರಾನಿ ತಮ್ಮ ಎದುರಾಳಿ ಇಸ್ರೆಲ್ನ ಜೂಲಿಯಾ ಗ್ಲುಶ್ಕೊ ವಿರುದ್ಧ 6-0, 6-1 ಸೆಟ್ಗಳ ಸುಲಭ ಗೆಲವು ದಾಖಲಿಸಿದರು.
ಪ್ರಿ ಕ್ವಾರ್ಟರ್ಗೆ ಸಾನಿಯಾ ಜೋಡಿ: ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಜತೆಗಾರ್ತಿ ಕಾರಾ ಬ್ಲ್ಯಾಕ್ ಜೋಡಿಯು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಪ್ರಿಕ್ವಾರ್ಟರ್ಫೈನಲ್ ಸುತ್ತಿಗೆ ಪ್ರವೇಶಿಸಿದೆ.
ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ 5ನೇ ರ್ಯಾಂಕಿಂಗ್ನ ಈ ಜೋಡಿಯು, ಪೊಲೆಂಡ್ನ ಅಲಿಜಾ ರೊಸೊಸ್ಕಾ ಹಾಗೂ ಕೆನಡಾದ ಗೆಬ್ರಿಲಾ ಡಬ್ರೊಸ್ಕಿ ಜೋಡಿ ವಿರುದ್ಧ 6-1, 6-2 ನೇರ ಸೆಟ್ಗಳ ಗೆಲವು ದಾಖಲಿಸಿದೆ.