ಶುರುವಿನಲ್ಲೇ ಮುಗ್ಗರಿಸಿದ ಭಾರತ
ವಿಶ್ವಕಪ್ ಹಾಕಿ: ಬೆಲ್ಜಿಯಂ ವಿರುದ್ಧ 3-2ರಿಂದ ಸೋಲು
ದಿ ಹೇಗ್ (ಹಾಲೆಂಡ್): ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದ ಅಂತಿಮ ಕ್ಷಣದಲ್ಲಿ ಬೆಲ್ಜಿಯಂ ತಂಡಕ್ಕೆ ಗೋಲು ಬಿಟ್ಟುಕೊಟ್ಟ ಭಾರತ ತಂಡ ಹಾಕಿ ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಸೋಲನುಭವಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ 3-2 ಗೋಲುಗಳ ಅಂತರದಲ್ಲಿ ಭಾರತ ತಂಡವನ್ನು ಮಣಿಸಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಬೆಲ್ಜಿಯಂ ಶುಭಾರಂಭ ಮಾಡಿದರೆ, ಭಾರತ ಸೋಲಿನ ಕಹಿ ಸವಿದಿದೆ. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಲ್ಜಿಯಂ ತಂಡ, ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಈ ವೇಳೆ ಭಾರತದ ಗೋಲ್ಕೀಪರ್ ಶ್ರೀಜೇಶ್ ಅತ್ಯುತ್ತಮವಾಗಿ ಗೋಲನ್ನು ತಡೆದರು. ಆದರೆ ಮೊದಲ ಅವಧಿ ಮುಕ್ತಾಯಕ್ಕೆ ಕೆಲವೆ ನಿಮಿಷ ಬಾಕಿ ಇರುವಾಗ ಗೋಲು ದಾಖಲಿಸಿದ ಬೆಲ್ಜಿಯಂ, ಮೊದಲಾರ್ಧದಲ್ಲಿ 1-0 ಮುನ್ನಡೆ ಕಂಡುಕೊಂಡಿತು.
ನಂತರ ಎರಡನೇ ಅವಧಿಯಲ್ಲಿ ಹೋರಾಟ ಪ್ರದರ್ಶನ ನೀಡಿದ ಭಾರತಕ್ಕೆ ಮಂದೀಪ್ ಸಿಂಗ್ ದಾಖಲಿಸಿದ ಗೋಲು, ತಂಡ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾಯಿತು. ನಂತರ ಮತ್ತೆ ಚುರುಕಿನ ಆಟ ಪ್ರದರ್ಶಿಸಿದ ಆಕಾಶ್ದೀಪ್ ಸಿಂಗ್ ಎರಡನೇ ಗೋಲು ದಾಖಲಿಸಿ ತಂಡ ಮುನ್ನಡೆ ಸಾಧಿಸುವಂತೆ ನೋಡಿಕೊಂಡರು. ಆದರೆ ನಂತರ ಎಚ್ಚೆತ್ತ ಬೆಲ್ಜಿಯಂ, ನಂತರ ಎರಡು ಗೋಲು ದಾಖಲಿಸಿ ಪಂದ್ಯವನ್ನು ಕೈವಶ ಮಾಡಿಕೊಂಡಿತು.ಮಲೇಷ್ಯಾ ಮಣಿಸಿದ ಆಸೀಸ್: ದಿನದ ಮೊದಲ ಪಂದ್ಯದಲ್ಲಿ ಗ್ಲೆನ್ ಟರ್ನರ್ ಎರಡು ಮಹತ್ವದ ಗೋಲು ದಾಖಲಿಸುವುದರೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಹಾಕಿ ವಿಶ್ವಕಪ್ ಪಂದ್ಯಾವಳಿಯ ಶನಿವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿತು. ಪಂದ್ಯದ 26ನೇ ನಿಮಿಷದಲ್ಲಿ ಗೋಲ್ಕೀಪರ್ ಕುಮಾರ್ ಸುಬ್ರಮಣ್ಯಂ ಬಲ ಬದಿಯಿಂದ ನಿಖರವಾದ ಹೊಡೆತದೊಂದಿಗೆ ಟರ್ನರ್ ಮಲೇಷ್ಯಾಕ್ಕೆ ಮೊದಲ ಶಾಕ್ ನೀಡಿದರು.ನಂತರ ಮಲೇಷ್ಯಾ ರಕ್ಷಣಾ ವಿಭಾಗ ಅದ್ಭುತ ಪ್ರದರ್ಶನ ತೋರಿತು.
ಹೀಗಾಗಿ ಎರಡು ಬಾರಿ ಅಪಾಯಕಾರಿ ಸಂದರ್ಭದಲ್ಲಿ ಆಸೀಸ್ ಆಟಗಾರರು ಗೋಲು ದಾಖಲಿಸುವುದನ್ನು ತಡೆಗಟ್ಟಿತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಮತ್ತೆ ಮೂರು ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ, ಪಂದ್ಯದಲ್ಲಿ ಪಾರಮ್ಯ ಮರೆಯುವ ಮೂಲಕ ಜಯದ ಕೇಕೆ ಹಾಕಿತು.