ವಿಂಡೀಸ್ ಭಾರತ ಪ್ರವಾಸ ಮೊಟಕು
ಧರ್ಮಶಾಲಾ ಪಂದ್ಯವೇ ಕೊನೆ; ಸ್ವದೇಶಕ್ಕೆ ತೆರಳಲು ಬ್ರಾವೋ ಬಳಗ ಸಿದ್ಧತೆ
ನವದೆಹಲಿ: ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರವಾಸವನ್ನು ಮೊಟಕುಗೊಳಿಸಿದ್ದು, ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದ ನಂತರ ಸ್ವದೇಶಕ್ಕೆ ತೆರಳಲು ತೀರ್ಮಾನಿಸಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ವಿಂಡೀಸ್ ಆಟಗಾರರ ವೇತನ ವಿವಾದ ತಾರಕ್ಕೇರಿದ್ದು, ಪ್ರಸ್ತುತ ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರವಾಸವನ್ನು ಮೊಟಕುಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾಸಕ್ಕೂ ಮೊದಲೇ ಆಟಗಾರರ ವೇತನ ವಿವಾದದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದ ವಿಂಡೀಸ್ ಕ್ರಿಕೆಟ್ ಮಂಡಳಿ, ಇದೀಗ ಆಟಗಾರರ ನಿರ್ಧಾರದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದೆ.
ಧರ್ಮಶಾಲಾದಲ್ಲಿ ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಾಲ್ಕನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇಂದಿನ ಪಂದ್ಯದ ಬಳಿಕ ವಿಂಡೀಸ್ ತಂಡ ಭಾರತ ಸರಣಿಯನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಲಿದೆ ಎಂದು ತಿಳಿದುಬಂದಿದೆ. ಭಾರತ ಪ್ರವಾಸದ ಆರಂಭದಲ್ಲಿಯೇ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ವಿಂಡೀಸ್ ತಂಡದ ಮ್ಯಾನೇಜರ್ ಕೈಗೊಂಡ ನಿರ್ಧಾರಗಳು ತೀವ್ರ ವಿವಾದಕ್ಕೀಡಾಗಿದ್ದವು. ಮ್ಯಾನೇಜರ್ ರಿಚಿ ರಿಚರ್ಡ್ಸ್‌ಸನ್ ಅವರು ವಿಂಡೀಸ್ ಆಟಗಾರರನ್ನು ಸಂಪರ್ಕಿಸದೇ ವೇತನ ಕುರಿತಂತೆ ವಿಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದು ವಿಂಡೀಸ್ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಟೀಂ ಮ್ಯಾನೇಜರ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಆಟಗಾರರು, ಭಾರತ ಪ್ರವಾಸಕ್ಕೆ ಹಿಂದೇಟು ಹಾಕಿದ್ದರು. ಬಳಿಕ ಟೀಂ ಮ್ಯಾನೇಜರ್ ರಿಚರ್ಡ್ಸ್‌ಸನ್ ಮತ್ತು ವಿಂಡೀಸ್ ಕ್ರಿಕೆಟ್ ಮಂಡಳಿ ಸಂಧಾನ ನಡೆಸಿತ್ತು. ಹೀಗಾಗಿ ಈ ವೇತನ ವಿವಾದ ತಾತ್ಕಾಲಿಕವಾಗಿ ಅಂತ್ಯಗೊಂಡಿತ್ತು. ಆದರೆ ಇಂದು ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿಂಡೀಸ್ ಕ್ರಿಕೆಟ್ ಮಂಡಳಿ ವಿಫಲವಾಗಿರುವುದರಿಂದ ಆಟಗಾರರು ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.
ಕ್ರಿಕೆಟ್ ಬಿಗ್‌ಬಾಸ್‌ಗೇ ಶಾಕ್ ನೀಡಿದ ವಿಂಡೀಸ್ ಆಟಗಾರರ ನಿರ್ಧಾರ..!
ಇನ್ನು ಭಾರತ ಪ್ರವಾಸವನ್ನು ಮೊಟಕುಗೊಳಿಸುವ ವಿಂಡೀಸ್ ಆಟಗಾರರ ನಿರ್ಧಾರ ಬಿಸಿಸಿಐಗೆ ಶಾಕ್ ನೀಡಿದೆ. ಭಾರತ ಪ್ರವಾಸದಲ್ಲಿ ವಿಂಡೀಸ್ ಒಟ್ಟು ಐದು ಏಕದಿನ ಪಂದ್ಯ ಮತ್ತು ಒಂದು ಟಿ20 ಪಂದ್ಯವನ್ನಾಡಬೇಕಿತ್ತು. ಈ ಪೈಕಿ ಎರಡು ಪಂದ್ಯಗಳು ಮುಗಿದಿದ್ದು, ವಿಶಾಖಪಟ್ಟಣದಲ್ಲಿ ನಡೆಯಬೇಕಿದ್ದ ಮೂರನೇ ಪಂದ್ಯ ಹುಡ್‌ಹುಡ್ ಚಂಡಮಾರುತದಿಂದಾಗಿ ರದ್ದಾಗಿತ್ತು. ಇಂದು ಧರ್ಮಶಾಲಾದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇನ್ನೂ 1 ಏಕದಿನ ಪಂದ್ಯ ಮತ್ತು ಟಿ20 ಪಂದ್ಯ ಬಾಕಿ ಇರುವಂತೆಯೇ ವಿಂಡೀಸ್ ತಂಡ ತವರಿಗೆ ಮರುಳುತ್ತಿದೆ. ಇದರಿಂದ ಸರಣಿ ಆಯೋಜಕರಿಗೆ ಭಾರಿ ನಷ್ಟವಾಗಲಿದ್ದು, ಇದು ಬಿಸಿಸಿಐ ಬಿಗ್‌ಬಾಸ್‌ಗಳ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ವಿಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಬಿಸಿಸಿಐ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಚಿಂತನೆ
ಇನ್ನು ಅರ್ಧಕ್ಕೆ ಮೊಟಕುಗೊಂಡಿರುವ ವಿಂಡೀಸ್ ಮತ್ತು ಭಾರತ ಸರಣಿಗೆ ಪರ್ಯಾಯವಾಗಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಆಹ್ವಾನಿಸುವ ಸಾಧ್ಯತೆ ಇದೆ. ಪ್ರಸ್ತುತ ಬಿಸಿಸಿಐ ಅಧಿಕಾರಿಗಳು ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೂ ಸಂಪರ್ಕದಲ್ಲಿದ್ದು, ಮುಂದಿನ 48 ಗಂಟೆಯೊಳಗೆ ಈ ಕುರಿತು ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.