ದೇಶಭಕ್ತಿ ಪ್ರಶ್ನಿಸಿದ್ದಾಗಲೇ ನಿವೃತ್ತಿ ಹೇಳ ಬಯಸಿದ್ದೆ
ನನ್ನ ದೇಶಭಕ್ತಿಯನ್ನು ಪ್ರಶ್ನಿಸಿದ್ದಾಗಲೇ ನಿವೃತ್ತಿ ಹೇಳಲು ಬಯಸಿದ್ದೆ. ಆದರೆ ಕೆಲವು ಸಣ್ಣ ಮನಸ್ಸಿನ ವ್ಯಕ್ತಿಗಳಿರುತ್ತಾರೆ. ಅಂಥಹವರನ್ನು ನಿರ್ಲಕ್ಷಿಸಿವುದೇ ಉತ್ತಮ ಎಂದು ಭಾವಿಸಿ ಮುಂದುವರೆಯುವ ಮನಸ್ಸು ಮಾಡಿದೆ.
ಹೈದರಾಬಾದ್: ನನ್ನ ದೇಶಭಕ್ತಿಯನ್ನು ಪ್ರಶ್ನಿಸಿದ್ದಾಗಲೇ ನಿವೃತ್ತಿ ಹೇಳಲು ಬಯಸಿದ್ದೆ. ಆದರೆ ಕೆಲವು ಸಣ್ಣ ಮನಸ್ಸಿನ ವ್ಯಕ್ತಿಗಳಿರುತ್ತಾರೆ. ಅಂಥಹವರನ್ನು ನಿರ್ಲಕ್ಷಿಸಿವುದೇ ಉತ್ತಮ ಎಂದು ಭಾವಿಸಿ ಮುಂದುವರೆಯುವ ಮನಸ್ಸು ಮಾಡಿದೆ.
ಈಗ ನಾನು ಸಿಂಗಾಪುರದಲ್ಲಿ WTA ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದೇನೆ. ಭವಿಷ್ಯದಲ್ಲೂ ಉತ್ತಮ ಸಾಧನೆ ಮಾಡುವ ತುಡಿತದಲ್ಲಿದ್ದೇನೆ. ಈಗ ನಾನು ಆತ್ಯುತ್ತಮ ಫಾರ್ಮ್‌ನಲ್ಲಿದ್ದು, ಮುಂದಿನ ವರ್ಷಕ್ಕೆ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನ ಪಡೆಯುವ ಗುರಿ ಹೊಂದಿದ್ದೇನೆ. ಈ ಕನಸು ನನಸಾಗುವ ವಿಶ್ವಾಸ ನನ್ನಲ್ಲಿದೆ. ಮೊನ್ನೆಯಷ್ಟೇ ಸಿಂಗಾಪುರದಲ್ಲಿ WTA ಕಿರೀಟ ಧರಿಸಿದ್ದ (ಡಬಲ್ಸ್‌ನಲ್ಲಿ ಜಿಂಬಾಬ್ವೆಯ ಕಾರಾ ಬ್ಲಾಕ್ ಜೊತೆಗೂಡಿ) ಭಾರತೀಯ ಟೆನ್ನಿಸ್ ರಂಗದ ಚತುರೆ ಸಾನಿಯಾ ಮಿರ್ಜಾ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 2010ರಲ್ಲೇ ನಾನು ಟೆನ್ನಿಸ್‌ಗೆ ಗುಡ್‌ಬೈ ಹೇಳ ಬಯಸಿದ್ದೆ. ಏಕೆಂದರೆ ಆಗ ನನ್ನ ದೇಶಭಕ್ತಿಯನ್ನೇ ಪ್ರಶ್ನಿಸಲಾಗಿತ್ತು. ಕೆಲ ಕ್ಷುಲ್ಲಕ ರಾಜಕೀಯದಿಂದಾಗಿ ನನನ್ನು ಭಾರತೀಯಳು ಅಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಕೊನೆಗೆ ಅದೆಲ್ಲವನ್ನೂ ನಿರ್ಲಕ್ಷಿಸಿ ಮುಂದೆ ಸಾಗಿದೆ ಎಂದು ಹೇಳಿದರು.
2008ರಲ್ಲಿ ಪರ್ತ್‌ನಲ್ಲಿ ನಡೆದ ಹೋಪ್‌ಮನ್ ಕಪ್ ಮಿಶ್ರ ತಂಡ ವಿಭಾಗದ ಸೆಣಸಿನ ವೇಳೆ ಇತರೆ ಆಟಗಾರ್ತಿಯರು ಪಂದ್ಯ ಆಡುತ್ತಿದ್ದರೆ, ಕುರ್ಚಿ ಮೇಲೆ ಕುಳಿತು ವೀಕ್ಷಿಸುತ್ತಿದ್ದ ಸಾನಿಯಾ ಮಿರ್ಜಾ ಮುಂದಿನ ಟೇಬಲ್ ಮೇಲೆ ತಮ್ಮ ಎರಡೂ ಕಾಲುಗಳನ್ನು ಚಾಚಿದ್ದರು. ಆಗ ಎದುರಿಗಿದ್ದ ರಾಷ್ಟ್ರಧ್ವಜದ ಬಗ್ಗೆ ಅಷ್ಟಾಗಿ ಗಮನ ಹರಿಸಿರಲಿಲ್ಲ. ಆದರೆ ಸಾನಿಯಾ ಕುಳಿತಿದ್ದ ಈ ಭಂಗಿಯ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಇದು ಸಾಕಷ್ಟು ಟೀಕೆಗಳಿಗೆ ಎಡೆ ಮಾಡಿಕೊಟ್ಟಿದ್ದಲ್ಲದೇ, ಆಕೆಯ ರಾಷ್ಟ್ರ ಪ್ರೇಮವನ್ನು ಪ್ರಶ್ನಿಸಲಾಗಿತ್ತು. ಅಷ್ಟೇ ಅಲ್ಲದೆ ನ್ಯಾಯಾಲಯಗಳಲ್ಲೂ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ರೀತಿಯ ಬೆಳವಣಿಗೆಗಳಿಂದಾಗಿ ನಾನು ಭಾವೋದ್ವೇಗಕ್ಕೆ ಒಳಗಾಗಿ, 2010ರಲ್ಲಿ ನಿವೃತ್ತಿ ತೆಗೆದುಕೊಳ್ಳುವ ಮನಸ್ಸು ಮಾಡಿದ್ದೆ ಎಂದು ಸಾನಿಯಾ ಸುದ್ದಿಗಾರರ ಮುಂದೆ ಅದನ್ನು ಬಹಿರಂಗಪಡಿಸಿದರು. ನಾನು ಸದಾ ನನ್ನ ದೇಶಕ್ಕಾಗಿ ಆಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಸಾಧನೆ ಮಾಡುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.
ಪ್ರಸ್ತುತ ಉತ್ತಮ ಟೆನ್ನಿಸ್ ಆಡುತ್ತಿದ್ದೇನೆ. ನನ್ನ ಈಗಿನ ಸಾಧನೆಗೆ ಕಠಿಣ ಪರಿಶ್ರಮವೇ ಕಾರಣ. ಅಲ್ಲದೆ, 2016ರಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನತ್ತಲೂ ಗಮನ ಕೇಂದ್ರೀಕರಿಸಿದ್ದು, ನನ್ನ ಶ್ರಮವನ್ನು ಮುಂದುವರೆಸಿಕೊಂಡು ಹೋಗಲಿದ್ದೇನೆ. ಕಾರಾ ಬ್ಲಾಕ್ ಅವರಿಂದಲೂ ಸಾಕಷ್ಟು ಅಂಶ ಕಲಿತ್ತಿದ್ದೇನೆ ಎಂದು ಹೇಳಿದರು. ಸಿಂಗಾಪುರದಲ್ಲಿ ಸಾಧನೆ ಮಾಡಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಅಭಿನಂದನೆ ಹೇಳಿದರು. ನಿಜಕ್ಕೂ ಅವರೊಬ್ಬ ಉತ್ತಮ ನಾಯಕ. ನಾನು ಅವರನ್ನು ಎರಡು ಬಾರಿ ಭೇಟಿ ಮಾಡಿದ್ದು, ಪ್ರತಿ ಬಾರಿ ಗೆದ್ದಾಗಲೂ ಅವರು ನನ್ನನ್ನು ಅಭಿನಂದಿಸಿ ಶುಭ ಹಾರೈಸುತ್ತಾರೆ ಎಂದು ಸಾನಿಯಾ ನುಡಿದರು.
ಸಿಂಗಾಪುರದಿಂದ ತವರು ಹೈದರಾಬಾದ್‌ಗೆ ಆಗಮಿಸಿದ 27ರ ಸಾನಿಯಾ ಅವರನ್ನು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಆದರದಿಂದ ಬರಮಾಡಿಕೊಂಡರು.
ಸಿಂಗಾಪುರದಲ್ಲಿ ಗೆದ್ದ WTA ಪ್ರಶಸ್ತಿಯನ್ನು ನನ್ನ ಭಾರತಕ್ಕೆ ಅರ್ಪಿಸುತ್ತೇನೆ. ನಿಜಕ್ಕೂ ಈ ಸಾಧನೆ ಖುಷಿ ತಂದಿದೆ. ಪ್ರಸ್ತುತ ನಾನು ಅತ್ಯುತ್ತಮ ಟೆನ್ನಿಸ್ ಆಡುತ್ತಿದ್ದು, ಮುಂದಿನ ವರ್ಷದಲ್ಲಿ ಜಾಗತಿಕ ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನ ಪಡೆಯುವ ಗುರಿ ಹೊಂದಿದ್ದೇನೆ.
-ಸಾನಿಯಾಮಿರ್ಜಾ