ಏಷ್ಯನ್ ಗೇಮ್ಸ್: ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಅತಿಥೇಯ ದ.ಕೊರಿಯಾ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಇಂಚಾನ್: ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಅತಿಥೇಯ ದ.ಕೊರಿಯಾ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಇಂಚಾನ್‌ನ ಸಿಯೋನ್ಹಕ್ ಹಾಕಿ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕೊರಿಯಾ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಪಂದ್ಯದ 44ನೇ ನಿಮಿಷದಲ್ಲಿ ಭಾರತದ ಪರ ಆಕಾಶ್ ದೀಪ್ ಸಿಂಗ್ ಅವರು ಸಿಡಿಸಿದ ಏಕೈಕ ಗೋಲ್ ಭಾರತ ತಂಡದ ಫೈನಲ್ ಪ್ರವೇಶಕ್ಕೆ ಹಾದಿ ಮಾಡಿಕೊಟ್ಟಿತು. 44ನೇ ನಿಮಿಷದಲ್ಲಿ ಒದಗಿಬಂದ ಗೋಲ್ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಆಕಾಶ್ ದೀಪ್ ಸಿಂಗ್ ಅವರು ತಮ್ಮ ಕಾಲುಗಳ ಮಧ್ಯದಿಂದ ಚೆಂಡನ್ನು ಗೋಲ್ ಪೆಟ್ಟಿಗೆಯತ್ತ ಯಶಸ್ವಿಯಾಗಿ ಬಾರಿಸುವ ಮೂಲಕ ಭಾರತ ಗೆಲುವಿಗೆ ಹಾದಿ ಮಾಡಿಕೊಟ್ಟರು.
ತೀವ್ರ ಕುತೂಹಲದಿಂದ ಸಾಗಿದ ಈ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಗೋಲ್‌ಗಾಗಿ ತೀವ್ರ ಪೈಪೋಟಿ ನೀಡಿದರು. ಕೊನೆಯ ಕ್ಷಣದಲ್ಲಿ ದಕ್ಷಿಣ ಕೊರಿಯಾದ ಆಟಗಾರರು ಕೊಂಚ ಆಕ್ರಮಣಕಾರಿ ಆಟಕ್ಕೆ ಮುಂದಾದರಾದರೂ ಗೋಲು ಗಳಿಸುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ತಂಡ 1-0 ಅಂತರದಿಂದ ದ.ಕೋರಿಯಾ ತಂಡವನ್ನು ಮಣಿಸಿತು. ಆ ಮೂಲಕ ಸತತ 12 ವರ್ಷಗಳ ಬಳಿಕ ಏಷ್ಯಾಡ್‌ನ ಫೈನಲ್ ಪ್ರವೇಶಿಸಿತು. ಅಲ್ಲದೆ 2016ರಲ್ಲಿ ರಿಯೋನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಭಾರತ ನೇರ ಅರ್ಹತೆ ಪಡೆಯಿತು.
ಫೈನಲ್‌ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಇದೇ ಅಕ್ಟೋಬರ್ 2ರಂದು ಫೈನಲ್ ಪಂದ್ಯ ನಡೆಯಲಿದೆ.